ರಾಜ್ಯದ ಆಸ್ತಿಗಳನ್ನು ಸರಕಾರ ರಕ್ಷಣೆ ಮಾಡಿಕೊಳ್ಳುತ್ತದೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ನಮ್ಮ ರಾಜ್ಯದ ಆಸ್ತಿಗಳನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಚ್‍ಎಎಲ್ ಅನ್ನು ಅನ್ನು ಯಾವುದೇ ಬಿಜೆಪಿ ಸರಕಾರ ನಮ್ಮ ರಾಜ್ಯಕ್ಕೆ ನೀಡಿಲ್ಲ. ಮೊದಲಿನಿಂದಲೂ ನಮ್ಮಲಿರುವ ತಾಂತ್ರಿಕ, ಮಾನವ ಸಂಪನ್ಮೂಲದಿಂದ ನೆಹರೂ ಅವರು ಇದನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಏರ್ ಬೇಸ್, ಏರ್ ಶೋಗಳನ್ನು ನೀಡಿದ್ದಾರೆ. ಬೆಂಗಳೂರು, ಬೀದರ್ ಗಳಲ್ಲಿ ವಾಯುನೆಲೆ ಸ್ಥಾಪಿಸಲಾಗಿದೆ. ಚಂದ್ರಬಾಬು ನಾಯ್ಡು ರಾಜಕೀಯವಾಗಿ ಮಾಡಿರುವ ಮನವಿ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ನಮ್ಮಲ್ಲೂ ಎಚ್‍ಎಎಲ್‍ಗೆ ಅಗತ್ಯ ಭೂಮಿಯನ್ನು ನೀಡಲಾಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ವಿಭಾಗಕ್ಕೆ ಜಮೀನು ನೀಡಲಾಗಿದೆ. ಅವರು ಹೊಸದಾಗಿ ಏನಾದರೂ ಮಾಡಿಕೊಳ್ಳಲಿ. ನೆರೆ ರಾಜ್ಯಗಳಲ್ಲಿ ಏನು ಆಗಬಾರದು ಎಂಬ ಉದ್ದೇಶ ನಮ್ಮದಲ್ಲ. ನಮ್ಮ ರಾಜ್ಯದಲ್ಲಿನ ಆಸ್ತಿಯನ್ನು ನಮ್ಮ ಸರಕಾರ ಕಾಪಾಡಲಿದೆ. ನಮ್ಮ ಆಸ್ತಿ, ನಮ್ಮ ನವರತ್ನಗಳು ಅವು. ಇವುಗಳನ್ನು ಉಳಿಸಿಕೊಳ್ಳುತ್ತೇವೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವರು ಮಾತನಾಡುತ್ತಿಲ್ಲ. ಇಂದು ಸಂಜೆಯೊಳಗೆ ಎಲ್ಲರೂ ಮಾತನಾಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.
ಮೈಸೂರು ಸ್ಯಾಂಡಲ್ ಸೋಪ್ಸ್‍ಗೆ ರಾಯಭಾರಿ ನೇಮಕ ಸಂಬಂಧ ಸಿಎಂ ಹಾಗೂ ಬೃಹತ್ ಕೈಗಾರಿಕಾ ಸಚಿವರ ಜತೆ ಮಾತನಾಡುತ್ತೇನೆ. ಈ ಹಿಂದೆ ಬಲ್ಬ್ ವಿಚಾರವಾಗಿ ಇದೇ ರೀತಿ ಚರ್ಚೆ ಬಂದಿತ್ತು. ನಾವು ನಮ್ಮ ನಟ ಪುನೀತ್ ಹಾಗೂ ರಮ್ಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದೆವು. ಅರಣ್ಯ ವಿಚಾರವಾಗಿ ಕ್ರಿಕೆಟಿಗ ಅನಿಲ್ ಕುಂಬ್ಳೆಯವರನ್ನು ರಾಯಭಾರಿಯನ್ನಾಗಿಸಲು ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ʼರವಿಕುಮಾರ್ ಅವಹೇಳನಕಾರಿ ಹೇಳಿಕೆʼ ಸರಕಾರ ಗಂಭೀರವಾಗಿ ಪರಿಗಣಿಸಿದೆ:
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ‘ಕಲಬುರಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ’ ಎಂದು ನಿಂದಿಸಿದ್ದು, ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ. ಕಲಬುರಗಿಯ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆವರು ತಮ್ಮದೇ ಆದ ಘನತೆಯನ್ನು ಹೊಂದಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸರಕಾರ ಅವರ ಬೆನ್ನಿಗೆ ನಿಲ್ಲಲಿದೆ. ಮಹಿಳಾ ಅಧಿಕಾರಿಯನ್ನು ಬಿಜೆಪಿಯವರು ನಡೆಸಿಕೊಳ್ಳುವ ರೀತಿ ಇದೇನಾ? ಈ ವಿಚಾರವಾಗಿ ಬಿಜೆಪಿ ನಾಯಕರು ಅದರಲ್ಲೂ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವರುಗಳು ಪ್ರತಿಕ್ರಿಯೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದಲ್ಲಿ ಹೊಸ ಪರ್ವ: ಬಂಗಾರಪೇಟೆಯ ಮಾಜಿ ಶಾಸಕ ಎಂ.ನಾರಾಯಣ ಸ್ವಾಮಿ ಪಕ್ಷ ಸೇರ್ಪಡೆಯಾಗಿದ್ದು, ಎರಡು ವರ್ಷಗಳ ನಂತರ ಬೇರೆ ಪಕ್ಷದಿಂದ ಅನೇಕ ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆ ಮೂಲಕ ಹೊಸ ಪರ್ವ ಆರಂಭವಾಗಿದೆ. ಬಂಗಾರಪೇಟೆ ಕ್ಷೇತ್ರದ ಮಾಜಿ ಶಾಸಕ ಎಂ.ನಾರಾಯಣ ಸ್ವಾಮಿ ಹಾಗೂ ನಮ್ಮ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಚನ್ನಾರೆಡ್ಡಿ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಇಂದು ಬಿಜೆಪಿಯಿಂದ ಸುಮಾರು 50 ಜನ ಪ್ರಮುಖ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಎರಡು ವರ್ಷಗಳ ನಂತರ ನಾವು ಮತ್ತೆ ಹೊಸ ಪರ್ವವನ್ನು ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.