×
Ad

ಶಾಲಾ-ಕಾಲೇಜುಗಳಲ್ಲಿ ಕಲೆಗಳ ಸ್ಪರ್ಧೆ ನಡೆಸಲು 25ಕೋಟಿ ರೂ.ಮೀಸಲು : ಡಿ.ಕೆ.ಶಿವಕುಮಾರ್

Update: 2025-06-12 21:29 IST

ಬೆಂಗಳೂರು : ‘ಮುಂದಿನ ದಿನಗಳಲ್ಲಿ ಶಾಲೆ-ಕಾಲೇಜುಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ಕಲೆಯ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಲು ತೀರ್ಮಾನಿಸಲಾಗುವುದು. ಅದಕ್ಕಾಗಿ 25 ಕೋಟಿ ರೂ. ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ, ಬ್ರಿಗೇಡ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ‘ನವೀಕೃತ ವೆಂಕಟಪ್ಪ ಚಿತ್ರಶಾಲೆಯ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಮೂರು ದಿನ ಕಲೆಗಳನ್ನು ಉಳಿಸಲು ಸ್ಪರ್ಧೆ ನಡೆಸಿ ಪ್ರಶಸ್ತಿಗಳನ್ನು ನೀಡಲಾಗುವುದು. ಇದರ ಬಗ್ಗೆ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಜತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಲೆ, ಸಂಸ್ಕೃತಿ ದೇಶದ ಆಸ್ತಿ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು. ಕಲೆ ಕಲೆಗಾಗಿ ಅಲ್ಲ ಅದು ಸಮಾಜಕ್ಕಾಗಿ. ಕಲೆ ಉಳಿಸಲು ಹೆಚ್ಚಿನ ಪ್ರೋತ್ಸಾಹ ನೀಡುವುದು ನನ್ನ ಕರ್ತವ್ಯ ಎಂದು ಅವರು ತಿಳಿಸಿದರು.

ಕನ್ನಡ ಸಂಸ್ಕೃತಿ ಒಂದು ಭಾಗ ಪ್ರವಾಸೋದ್ಯಮ ಒಂದು ಭಾಗ. ಬ್ರಿಗೇಡ್ ಫೌಂಡೇಷನ್ ಹಾಗೂ ಎಂ.ಆರ್.ಜೈಶಂಕರ್ ಅವರ ಕೆಲಸದ ಬಗ್ಗೆ ಬಹಳ ನಂಬಿಕೆಯಿದೆ. ಸರಕಾರ ಬರೀ ವಿಧಾನಸೌಧ, ಹೈಕೋರ್ಟ್ ಹಾಗೂ ಕೆಲವು ಕಟ್ಟಡಗಳನ್ನು ನಿರ್ಮಾಣ ಮಾಡಿದೆ. ಉಳಿದಿರುವ ಕಟ್ಟಡಗಳನ್ನು ಬ್ರಿಗೇಡ್, ಪ್ರೆಸ್ಟೀಜ್‍ನಂತಹ ಕಂಪೆನಿಗಳು ಕಟ್ಟಿವೆ ಎಂದು ತಿಳಿಸಿದರು.

ಸರಕಾರ ಮುಕ್ತವಾಗಿದೆ. ಸಾರ್ವಜನಿಕರು ಸರಕಾರಕ್ಕೆ ಸಲಹೆಗಳನ್ನು ನೀಡಬಹುದು. ನಮ್ಮ ಇತಿಹಾಸವನ್ನು ಉಳಿಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕೊಡುವ ಕೆಲಸವಾಗಬೇಕು. ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಾಗಿರಬಹುದು. ಆದರೆ ಬೆಂಗಳೂರಿಗೆ ಹೊಸ ರೂಪವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸರಕಾರ, ಸಾರ್ವಜನಿಕರು ಮತ್ತು ಖಾಸಗಿ ಕಂಪೆನಿಗಳು ಪ್ರಾಮಾಣಿಕವಾಗಿ ಕೈಜೋಡಿಸಿದರೆ, ವೆಂಕಟಪ್ಪ ಗ್ಯಾಲರಿ ರೀತಿಯಲ್ಲಿ ಉತ್ತಮ ಕೆಲಸಗಳು ಆಗುತ್ತವೆ. 8ರಿಂದ 9 ಕೋಟಿ ರೂ.ನಲ್ಲಿ ವೆಂಕಟಪ್ಪ ಚಿತ್ರ ಶಾಲೆ ನಿರ್ಮಾಣ ಮಾಡಲಾಗಿದೆ. ವೆಂಕಟಪ್ಪ ಅವರನ್ನು ಕಲಾ ತಪಸ್ವಿ ಎಂದು ಗುರುತಿಸುತ್ತೇವೆ. ಅವರೂ ಅವರ ಕೃತಿಗಳು ಕರ್ನಾಟಕದ ಆಸ್ತಿ. ಕಲೆಯ ಸೇವೆಗಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.

ಕಲಾವಿದ ಕೆ.ಕೆ.ಹೆಬ್ಬಾರ್ ಅವರ ಕಲಾಕೃತಿಗಳು ಎಲ್ಲರ ಗಮನಸೆಳೆಯುತ್ತವೆ. ರುಮಾಲೆ ಚನ್ನಬಸಪ್ಪ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರೂ ಕೂಡ ಅವರು ರಾಜಕೀಯವನ್ನು ತೊರೆದು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅವರ ಜೀವನ ಸ್ವಾತಂತ್ರ್ಯ ಹೋರಾಟ ಮತ್ತು ಚಿತ್ರಕಲೆಗೆ ಮೀಸಲಿಟ್ಟಿದ್ದರು ಎಂದು ನೆನಪು ಮಾಡಿಕೊಂಡರು.

ಬ್ರಿಗೇಡ್ ಫೌಂಡೇಷನ್ ಹೆಸರಿನಲ್ಲಿ ಒಂದು ಗ್ಯಾಲರಿ ಮಾಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಗ್ರಾಮಾಂತರ ಪ್ರದೇಶದ ಶಿಲ್ಪಕಲೆಗಳನ್ನು ಬ್ರಿಗೇಡ್ ಸಂಸ್ಥೆ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್ ಬ್ರಿಗೇಡ್ ಫೌಂಡೇಷನ್ ಕಾರ್ಯಾಧ್ಯಕ್ಷ ಎಂ.ಆರ್. ಜೈಶಂಕರ್, ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಪ್ರವಾಸೋದ್ಯಮ ಇಲಾಖೆಯ ಸರಕಾರದ ಕಾರ್ಯದರ್ಶಿ ಸಲ್ಮಾ.ಕೆ.ಫಹೀಂ, ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ದೇವರಾಜು.ಎ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News