ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದು ಸಲ್ಲದು : ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು: ‘ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದು ಸಲ್ಲದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾನು ಖಾಸಗಿ ಕಾರ್ಯಕ್ರಮ ನಿಮಿತ್ತ ಮಹಾರಾಷ್ಟ್ರದ ಶಿರಡಿ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ ಕೆಲವು ಟಿವಿ ವಾಹಿನಿಗಳು ಮತ್ತಿತರ ಮಾಧ್ಯಮಗಳಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಗೆ ತೆರಳಿದ್ದೇನೆ ಎಂದು ವರದಿ ಆಗಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ’ ಎಂದು ಸ್ಪಷ್ಟಣೆ ನೀಡಿದ್ದಾರೆ.
‘ಮುಖ್ಯಮಂತ್ರಿ ಬದಲಾವಣೆ’ ಕುರಿತು ಕೆಲ ಶಾಸಕರ ಹೇಳಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ‘ಸಿಎಂ ಕುರ್ಚಿ ಸಧ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ’ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ ಖುದ್ದು ಸಿಎಂ ಸಿದ್ದರಾಮಯ್ಯನವರೇ, ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಪ್ರಕಟಿಸಿದ್ದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಆದರೂ, ‘ಮುಖ್ಯಮಂತ್ರಿ ಬದಲಾವಣೆ’ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರು ಹಾಗೂ ಶಾಸಕರು ಹೇಳಿಕೆಗಳನ್ನು ನೀಡುತ್ತಿದ್ದು, ಗೊಂದಲಕ್ಕೆ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ‘ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಗೆ ತೆರಳಿದ್ದೇನೆಂಬ ವರದಿ ಸತ್ಯಕ್ಕೆ ದೂರವಾದ ವಿಚಾರ’ ಎಂದು ಸ್ಪಷ್ಟಣೆ ನೀಡಿದ್ದಾರೆ.