ಕಾನೂನು ಕೈಗೆತ್ತಿಕೊಳ್ಳಬೇಡಿ; ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ಡಿ.ಕೆ.ಶಿವಕುಮಾರ್
ಬೆಂಗಳೂರು : ಕನ್ನಡ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಕಡತಗಳು ಸಿದ್ಧವಾಗುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದ ಕಂಠೀರವ ಕ್ರೀಡಾಂಗಣದ ಬಳಿ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕರಾಳ ದಿನಾಚರಣೆ ಆಚರಿಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಅವರು, ಹೋರಾಟಗಾರರಿಗೆ ಮುಕ್ತಿ ನೀಡಬೇಕು ಎಂಬ ತೀರ್ಮಾನಕ್ಕೆ ಸರಕಾರ ಬಂದಿದೆ. ಇಂತಹ ಸಂದರ್ಭದಲ್ಲಿ ನೀವು ಮತ್ತೆ ಈ ರೀತಿ ಮಾಡಿದರೆ ಪೊಲೀಸರು ಪ್ರಕರಣ ವಾಪಸ್ ಪಡೆಯಲು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೀಗಾಗಿ ದಯವಿಟ್ಟು ಕಾನೂನು ಕೈಗೆತ್ತಿಕೊಳ್ಳದೆ ಸರಕಾರಕ್ಕೆ ಸಹಕಾರ ನೀಡಿ ಎಂದರು.
ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಲ್ಲಿನ ಕಾನೂನು ಮತ್ತು ನೆಲದ ಗೌರವವನ್ನು ಕಾಪಾಡಬೇಕು. ನಮ್ಮ ಭೂಮಿಯಲ್ಲಿ ಇದ್ದ ಮೇಲೆ ನಮ್ಮ ಭೂಮಿಗೆ ಗೌರವ ಕೊಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನೈತಿಕ ಪೊಲೀಸ್ ಗಿರಿ ಬೇಡ :
ಯಾವುದೇ ಕನ್ನಡಪರ ಸಂಘಟನೆಗಳು, ಐಟಿ ಸಂಸ್ಥೆಗಳ ಮೇಲೆ ದಾಳಿ ಮಾಡಲು ಹೋಗಬಾರದು. ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನೈತಿಕ ಪೊಲೀಸ್ಗಿರಿ ನಡೆಸಲು ಅವಕಾಶವಿಲ್ಲ. ಸರಕಾರ ಮತ್ತು ಪೊಲೀಸ್ ಇಲಾಖೆ ಇದೆ. ಯಾವುದೇ ದೂರು ಅಥವಾ ಸಮಸ್ಯೆಗಳಿದ್ದರೆ ಸರಕಾರದ ಗಮನಕ್ಕೆ ತನ್ನಿ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನ್ನಡ ಭಾಷೆ, ಕರ್ನಾಟಕದ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಸರಕಾರವೇ ನಿರ್ವಹಿಸಲಿದೆ. ಹೀಗಾಗಿ ಯಾರೂ ಕಾನೂನು ಉಲ್ಲಂಘಿಸುವ ಮೂಲಕ ಸಮಸ್ಯೆ ಸೃಷ್ಟಿಸಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮತ ಹಕ್ಕು ರಕ್ಷಿಸಲು ಕಾಂಗ್ರೆಸ್ ಬದ್ಧ :
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ದೇಶದ ಪ್ರತಿಯೊಬ್ಬ ಮತದಾರರಿಗೆ ಮತದಾನದ ಹಕ್ಕು ನೀಡುವುದು ನಮ್ಮ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಲು ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವು ಪ್ರತಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದರು.
ಹೊಸದಿಲ್ಲಿಯ ಪ್ರತಿಭಟನೆ ಯಶಸ್ವಿಯಾಗಲಿದೆ. ಪ್ರತಿಯೊಬ್ಬ ಮತದಾರರ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾನದ ಹಕ್ಕು ಎಂದರೆ ಅದು ಬದುಕುವ ಹಕ್ಕಿದ್ದಂತೆ. ಆದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಲಕ್ಷಾಂತರ ಜನರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದೆ ಎಂದು ಸಿಎಂ ತಿಳಿಸಿದರು.