ಗುಣಮಟ್ಟದ ವೈಟ್ ಟ್ಯಾಪಿಂಗ್‍ಗಾಗಿ ಕಾಮಗಾರಿಗಳ ಪರಿಶೀಲನೆ: ಡಿ.ಕೆ.ಶಿವಕುಮಾರ್
ಬೆಂಗಳೂರು : ನಗರದಲ್ಲಿ ಕೆಲ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಹಾಕಲಾಗುತ್ತಿದ್ದು, ಗುಣಮಟ್ಟ ಚೆನ್ನಾಗಿರಬೇಕು. ಈ ರಸ್ತೆಗಳು ಕನಿಷ್ಟ 30 ವರ್ಷಗಳ ಕಾಲ ಬಾಳಿಕೆ ಬರಬೇಕು. ಹೀಗಾಗಿ ನಾನು ಆಗಾಗ್ಗೆ ಕಾಮಗಾರಿಗಳ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ತೋರಿಸುವ ಜಾಗದಲ್ಲಿ ಪರಿಶೀಲನೆ ಮಾಡುವುದಿಲ್ಲ, ನಾನು ಎಲ್ಲಿ ಹೇಳುತ್ತೇನೋ ಅಲ್ಲಿ ನಿಲ್ಲಿಸಿ ಪರಿಶೀಲನೆ ಮಾಡಲಾಗುವುದು. ಈಗ ಪರಿಶೀಲನೆ ಮಾಡಿದಾಗ ಅರ್ಧ ಅಡಿ ರಸ್ತೆ ಇದೆ. ಈ ರಸ್ತೆಯಲ್ಲಿ ನೀರು, ಕೇಬಲ್ ಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಲ್ಲಾ ಶಾಸಕರು ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಸ ವಿಲೇವಾರಿ ಟೆಂಡರ್ ಕರೆಯಲು ಇದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಾಲ್ಕು ತಿಂಗಳ ಒಳಗೆ ಟೆಂಡರ್ ಕರೆಯಬೇಕು ಎಂದು ನ್ಯಾಯಾಲಯ ಅವಕಾಶ ನೀಡಿದ್ದು, ನಾವು ಟೆಂಡರ್ ಕರೆದು ಕಸ ವಿಲೇವಾರಿ ಕೆಲಸ ಮಾಡುತ್ತೇವೆ. ಕೆಲವರು ಒಂದೇ ಮನೆಯಲ್ಲಿ ಕೂತು ಟೆಂಡರ್ ಹಾಕಿರುವ ದಾಖಲೆಗಳು ನಮಗೆ ಸಿಕ್ಕಿವೆ. ಅವರು ವಿರೋಧ ಪಕ್ಷದವರ ಬಳಿ ಹೋಗಿ ದೂರು ನೀಡಿದ್ದರು. ಆದರೆ ನಾವು ಶುದ್ಧ ಆಡಳಿತ ಕೊಟ್ಟು ಸ್ವಚ್ಛ ಬೆಂಗಳೂರು ನಿರ್ಮಾಣ ಮಾಡುತ್ತೇವೆ. ಒಂದೇ ದಿನ ಎಲ್ಲಾ ಬದಲಾವಣೆ, ಟನಲ್, ಫ್ಲೈ ಓವರ್, ಅಂಡರ್ ಪಾಸ್ ಆಗುವುದಿಲ್ಲ. ಹಂತ ಹಂತವಾಗಿ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ರಿಝ್ವಾನ್ ಅರ್ಶದ್, ಎ.ಸಿ.ಶ್ರೀನಿವಾಸ, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.