×
Ad

ವಿದೇಶಿಯರು ಅಕ್ರಮವಾಗಿ ದೇಶದೊಳಗೆ ನುಸುಳಲು ಕೇಂದ್ರ ಸರಕಾರವೇ ಹೊಣೆ: ಡಾ.ಜಿ.ಪರಮೇಶ್ವರ್

Update: 2026-01-10 20:35 IST

ಜಿ.ಪರಮೇಶ್ವರ್

ಬೆಂಗಳೂರು : ಭಾರತದ ಗಡಿಯಲ್ಲಿ ಬಾಂಗ್ಲಾ ಹಾಗೂ ಇತರ ದೇಶದ ನಿವಾಸಿಗಳು ಅಕ್ರಮವಾಗಿ ದೇಶದ ಒಳಗೆ ನುಸುಳಲು ಕೇಂದ್ರ ಸರಕಾರವೇ ಹೊಣೆಯಾಗಿದೆ. ಬಿಎಸ್‌ಎಫ್ ಸೇರಿದಂತೆ ಎಲ್ಲ ರೀತಿಯ ಪಡೆಗಳನ್ನು ಕೇಂದ್ರ ಸರಕಾರವೇ ನಿರ್ವಹಿಸುತ್ತಿದೆ. ಆದರೆ, ಪರಿಣಾಮಕಾರಿಯಾಗಿ ನಿರ್ವಹಣೆ ಮಾಡದಿದ್ದಾಗ ಬಾಂಗ್ಲಾ ನಿವಾಸಿಗಳು ದೇಶದೊಳಗೆ ನುಸುಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ 'ಗಡಿಯಲ್ಲಿ ಹಣಕೊಟ್ಟು ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಡಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಒಳನುಸುಳುವಿಕೆಯನ್ನು ತಡೆಯುವುದು ಕೇಂದ್ರದ ಜವಾಬ್ದಾರಿ. ಕೇಂದ್ರ ಸರಕಾರವು ಗಡಿಯನ್ನು ಬಿಗಿಗೊಳಿಸಬೇಕು. ಹಣಕೊಟ್ಟು ಒಳಗೆ ಬರುತ್ತಾರೆ ಎಂದರೆ ಗಡಿಪ್ರದೇಶದಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಅನ್ನಿಸುತ್ತದೆ. ಈ ಬಗ್ಗೆ ರಕ್ಷಣಾ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ನಾವು ಕಠಿಣವಾಗಿದ್ದೇವೆ. ಏಜೆಂಟ್‌ಗಳ ಮೂಲಕ ಅಕ್ರಮವಾಗಿ ಒಳಗೆ ಬಂದಿರುವ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡುತ್ತಿದ್ದೇವೆ. ಹೊರ ದೇಶದವರ ದಾಖಲೆಗಳನ್ನು ಪರಿಶೀಲಿಸಬೇಕು. ಅನುಮಾನಿತರು ಕಂಡು ಬಂದರೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಅಧಿಕೃತ ವೀಸಾ ಇಲ್ಲದವರಿಗೆ ಮನೆ ಬಾಡಿಗೆ ನೀಡಬಾರದು ಎಂದು ಸೂಚನೆಗಳನ್ನು ನೀಡಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯದಲ್ಲಿ ವಾಸಿಸಲು ಮನೆ ಬಾಡಿಗೆ ನೀಡುವ ಮಾಲಕರ ವಿರುದ್ಧವೂ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಕ್ರಮ ವಲಸಿಗರ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದಿನನಿತ್ಯವೂ ಪರಿಶೀಲನೆ ನಡೆಯುತ್ತಿದೆ. ಬಾಂಗ್ಲಾದೇಶ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸಕ್ರಮವಾಗಿ ಆಗಮಿಸಿರುವವರ ದಾಖಲಾತಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಅಕ್ರಮವಾಗಿ ಬಂದಿರುವವರನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದು ಜಿ.ಪರಮೇಶ್ವರ್ ಹೇಳಿದರು.

ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕದೆ ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಹೆಚ್ಚಿನ ಅಧ್ಯಯನಕ್ಕಾಗಿ ರಾಜ್ಯಪಾಲರು ವಿಧೇಯಕವನ್ನು ತಮ್ಮ ಬಳಿ ಉಳಿಸಿಕೊಂಡಿರಬಹುದು. ಹೆಚ್ಚುವರಿ ಮಾಹಿತಿ ಕೇಳಿದರೆ ಕೊಡುತ್ತೇವೆ. ಒಂದು ವೇಳೆ ಒಂದು ವೇಳೆ ತಿರಸ್ಕೃತಗೊಳಿಸಿದರೆ ಮುಂದೆ ನಿರ್ಧಾರದ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಕನ್ನಡಕ್ಕೆ ಆದ್ಯತೆ ಇರಲಿ: ಕೇರಳದ ಗಡಿ ಭಾಗದಲ್ಲಿ 200ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಅಲ್ಲಿ ಮಲಯಾಳಂ ಕಲಿಸಬೇಕು ಎಂದು ಕೇರಳ ಸರಕಾರ ನಿರ್ಧಾರ ಮಾಡಿದೆ. ಈ ವೇಳೆ ಕನ್ನಡಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಮಂಗಳೂರು ವ್ಯಾಪಾರಿ ಕೇಂದ್ರವಾಗಿದೆ. ಅಲ್ಲಿ ಮಲೆಯಾಳಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆ ನೋಡಿದರೆ ಕೇರಳದಿಂದ ಬಂದು ಇಲ್ಲಿ ವ್ಯಾಪಾರ ಮಾಡುವರು ಕನ್ನಡ ಕಲಿಯಬೇಕು. ಕಾಸರಗೋಡಿನಲ್ಲಿ ಕನ್ನಡ ಮಾತನಾಡುವರು ಹೆಚ್ಚಿದ್ದಾರೆ ಅಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು.

ಡಾ.ಜಿ.ಪರಮೇಶ್ವರ್, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News