×
Ad

‘ನಾಯಕತ್ವ ಬದಲಾವಣೆʼ ವಿಚಾರ | ರಾಯರೆಡ್ಡಿ ಹೇಳಿಕೆಗೆ ಶಾಸಕ ಬಸವರಾಜ್ ವಿ.ಶಿವಗಂಗ ಆಕ್ಷೇಪ

Update: 2026-01-10 20:17 IST

ಬೆಂಗಳೂರು : ‘2028ರ ವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರಲಿ’ ಎಂಬ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದಿರುವುದು ‘ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ’ ಎಂದು ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ವಿ.ಶಿವಗಂಗ ಆಕ್ಷೇಪಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಯರೆಡ್ಡಿ ಹಿರಿಯರಿದ್ದಾರೆ, ಅವರ ಮಾತನ್ನು ಹೈಕಮಾಂಡ್ ಗಮನಿಸಬೇಕಾಗಿದೆ. ‘ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾರೂ ಮಾತನಾಡಬೇಡಿ’ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದ. ಹೀಗಿರುವಾಗ ರಾಯರೆಡ್ಡಿ ಹೇಳಿಕೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಟೀಕಿಸಿದರು.

ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರವನ್ನು ನಾವು ಒಪ್ಪಿಕೊಂಡಿದ್ದೇವೆ. ಪ್ರತಿಯೊಬ್ಬ ಶಾಸಕರಿಗೂ ಅವರದ್ದೇ ಆದ ಗೌರವ ಇದೆ. ಒಬ್ಬರಿಗೊಂದು ನೋಟಿಸ್ ಮತ್ತೊಬ್ಬರಿಗೆ ನೀಡದೆ ಇರುವುದು ಸರಿಯಲ್ಲ ಎಂದು ಶಿವಗಂಗ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಮಾತನಾಡುತ್ತೇನೆ: ಸಂಕ್ರಾಂತಿ ಬಳಿಕ ನಾನು ಮಾತನಾಡುತ್ತೇನೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ಎರಡೆರೆಡು ಬಾರಿ ಹೇಳಿಕೆ ನೀಡಿದ್ದಾರೆ. ನುಡಿದಂತೆ ನಡೆಯಬೇಕು ಎಂದೂ ಅವರು ಹೇಳಿದ್ದಾರೆ. ರಾಯರೆಡ್ಡಿ, ರಾಜಣ್ಣ ನಾನು ಯಾರೂ ಹೈಕಮಾಂಡ್ ಅಲ್ಲ. 2030ರ ವರೆಗೂ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಹೇಳಿದರೆ ಅದಕ್ಕೆ ನಾವೂ ಬದ್ದ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ವೀಕ್ಷಕರಾಗಿ ನೇಮಕ ಮಾಡಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರಿಗೆ ಸಾಮರ್ಥ್ಯ ಇದೆ ಎಂದು ಆ ಸ್ಥಾನವನ್ನು ನೀಡಲಾಗಿದೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಸಿಎಂ ಕುರ್ಚಿ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News