×
Ad

ಕೇರಳದಲ್ಲಿ ಕನ್ನಡ ಶಾಲೆಗಳ ಮೇಲೆ ಮಲಯಾಳಂ ಹೇರಿಕೆ ಖಂಡನೀಯ : ಬಿ.ವೈ.ವಿಜಯೇಂದ್ರ

"ರಾಜ್ಯ ಸರಕಾರ ಮಲಯಾಳಂ ಹೇರಿಕೆ ವಿರುದ್ಧ ಗಟ್ಟಿ ನಿಲುವು ತೆಗೆದುಕೊಳ್ಳಲಿ"

Update: 2026-01-10 13:14 IST

ಬಿ.ವೈ.ವಿಜಯೇಂದ್ರ

ಬೆಂಗಳೂರು: ಕರ್ನಾಟಕದ ಗಡಿ ಭಾಗದ ಕೇರಳ ರಾಜ್ಯದ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲೆಯಾಳ ಭಾಷೆ ಹೇರುವ ಕೆಲಸಕ್ಕೆ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರಕಾರ ಕೈ ಹಾಕಿದೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಇದನ್ನು ಪ್ರಬಲವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲ, ಎಲ್ಲ ಕನ್ನಡಪರ ಸಂಘಟನೆಗಳು ಇದನ್ನು ಪ್ರಬಲವಾಗಿ ವಿರೋಧಿಸಿವೆ. ಕೇರಳದಲ್ಲಿರುವ ನಮ್ಮ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸದಲ್ಲಿ ಕೇವಲ ನಿಮ್ಮ ಹೇಳಿಕೆ, ಪತ್ರ ಬರೆದರೆ ಸಾಕಾಗುವುದಿಲ್ಲ. ನಿಮ್ಮ ಕೆ.ಸಿ.ವೇಣುಗೋಪಾಲ್ ಅವರ ಕಿವಿ ಹಿಂಡಿ ಕನ್ನಡಿಗರಿಗೆ ಅನ್ಯಾಯ ಆಗಬಾರದು, ಕೇರಳದಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಮಾಡುವುದು, ಮಲಯಾಳಂ ಹೇರಿಕೆಗೆ ಅವಕಾಶ ಕೊಡಬಾರದೆಂದು ಸಿದ್ದರಾಮಯ್ಯರ ಸರಕಾರ ಗಟ್ಟಿ ನಿಲುವನ್ನು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಎಐಸಿಸಿ) ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ವಿಚಾರದಲ್ಲಿ ಪದೇಪದೇ ಮೂಗು ತೂರಿಸುವ ವಿಚಾರ ಮಾಡುತ್ತಾರೆ. ವಯನಾಡಿನಲ್ಲಿ ನಮ್ಮ ಕಾಂಗ್ರೆಸ್ ಸರಕಾರ ವಿವಿಧ ಸಂದರ್ಭಗಳಲ್ಲಿ ಸಹಾಯಹಸ್ತ ಚಾಚಿದ್ದು ನಿಮಗೆಲ್ಲ ಗೊತ್ತಿದೆ ಎಂದು ಗಮನ ಸೆಳೆದರು. ಮೊನ್ನೆ ಕೋಗಿಲು ಪ್ರಕರಣದಲ್ಲಿ ಕೆ.ಸಿ.ವೇಣುಗೋಪಾಲ್ ಅಬ್ಬರಿಸಿದ್ದಕ್ಕೆ ಇಡೀ ಕಾಂಗ್ರೆಸ್ ಸರಕಾರ ನಡುಗಿ ಹೋಗಿತ್ತು ಎಂದು ತಿಳಿಸಿದರು.

ದ್ವೇಷ ಭಾಷಣ ಸಂಬಂಧಿ ಕಾಯ್ದೆಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ಕೊಡದೇ ಹಿಂಬಾಗಿಲಿನಿಂದ ಮಂಜೂರು ಮಾಡಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಯಾವ ರೀತಿ ನಡೆದುಕೊಂಡಿದೆ ಎಂದು ನಿಮಗೆಲ್ಲರಿಗೂ ಗೊತ್ತಿದೆ. ಬಿಜೆಪಿ ಮಾತ್ರವಲ್ಲದೇ, ಜೆಡಿಎಸ್, ಬೇರೆ ಬೇರೆ ಸಂಘಟನೆಗಳು ದ್ವೇಷ ಭಾಷಣ ಕಾಯ್ದೆಯನ್ನು ವಿರೋಧಿಸಿವೆ. ಕಾಂಗ್ರೆಸ್ ಸರಕಾರವು ಒಂದು ರೀತಿ ತುರ್ತು ಪರಿಸ್ಥಿತಿ ಹೇರುವಂಥ ದುಸ್ಸಾಹಸಕ್ಕೆ ಕೈ ಹಾಕಿದೆ. ರಾಜ್ಯದಲ್ಲಿ ಪ್ರತಿಯೊಬ್ಬರೂ ಇದನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ಮಾನ್ಯ ರಾಜ್ಯಪಾಲರು ಅದನ್ನು ತಡೆ ಹಿಡಿಯುವ ಕೆಲಸ ಮಾಡಿದ್ದಾರೆ. ನಾವು ಈ ವಿಚಾರವಾಗಿ ಮನವಿ ಮಾಡಿದ್ದೆವು ಎಂದು ತಿಳಿಸಿದರು.

ಸೋಮನಾಥ ಸ್ವಾಭಿಮಾನಿ ಪರ್ವದ ಅಂಗವಾಗಿ ದೇಶದ ಎಲ್ಲ ಶಿವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ದೇಶಭಕ್ತರು ಶಿವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 11 ಬಾರಿ ಓಂ ನಮಃ ಶಿವಾಯ ಧ್ಯಾನವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.

ವಿಶೇಷ ಪೂಜೆ: “ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ತುಂಬಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News