ಗುತ್ತಿಗೆ ಪದ್ಧತಿ ಬಡತನವನ್ನು ಶಾಶ್ವತಗೊಳಿಸುತ್ತದೆ : ಡಾ.ನಿರಂಜನಾರಾಧ್ಯ
ಬೆಂಗಳೂರು : ಪೋಷಕರು ಗುತ್ತಿಗೆ ಪದ್ಧತಿಯಂತಹ ಅಸುರಕ್ಷಿತ ಉದ್ಯೋಗಗಳಲ್ಲಿ ಸಿಲುಕಿಕೊಂಡಾಗ ತಮ್ಮ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗುತ್ತಿಗೆ ಪದ್ಧತಿ ಬಡತನವನ್ನು ಶಾಶ್ವತಗೊಳಿಸುತ್ತದೆ ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅಭಿಪ್ರಯಪಟ್ಟಿದ್ದಾರೆ.
ಗುರುವಾರ ನಗರದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಸಿಸಿಟಿಯು) ಆಯೋಜಿಸಿದ್ದ ‘ಗುತ್ತಿಗೆ ಕಾರ್ಮಿಕ ವ್ಯವಸ್ಥೆ ಮತ್ತು ಮರೀಚಿಕೆಯಾದ ಘನತೆಯ ವೇತನ: ಎಲ್ಲಿದೆ ಸಾಂವಿಧಾನಿಕ ಭರವಸೆ?’ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪದ್ಧತಿಯು ಕೇವಲ ಕಾರ್ಮಿಕರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ಇಡೀ ಕುಟುಂಬ, ಮಕ್ಕಳು ಮತ್ತು ಸಮಾಜವನ್ನೇ ಬಾಧಿಸುವ ಸಮಸ್ಯೆ ಎಂದು ಗುರುತಿಸಬೇಕು ಎಂದರು.
ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಗುತ್ತಿಗೆ ಕಾರ್ಮಿಕ ಪದ್ದತಿಯು ದಲಿತ, ಆದಿವಾಸಿ ಮತ್ತು ಮಹಿಳೆಯರನ್ನು ಕಡಿಮೆ ವೇತನದ ಕೆಲಸಕ್ಕೆ ತಳ್ಳುವ ಮೂಲಕ ಜಾತಿ, ವರ್ಗ ಮತ್ತು ಲಿಂಗ ಶ್ರೇಣಿಗಳನ್ನು ಬಲಪಡಿಸುತ್ತದೆ. ಹೀಗಾಗಿ ಈ ಪದ್ದತಿಯನ್ನು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ನಿರಾಕರಣೆ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಆರೋಗ್ಯ ತಜ್ಞೆ ಡಾ. ಸಿಲ್ವಿಯಾ ಕಾರ್ಪಗಮ್ ಮಾತನಾಡಿ, ಅಸಮರ್ಪಕ ಆದಾಯವು ಜೀವನೋಪಾಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಇಡೀ ಸಮುದಾಯವನ್ನು ಕಳಪೆ ಆರೋಗ್ಯ ವ್ಯವಸ್ಥೆ ಮತ್ತು ಅಪೌಷ್ಟಿಕತೆಯ ಸುಳಿಗೆ ಸಿಲುಕಿಸುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಕಾರ್ಮಿಕ ಹಕ್ಕುಗಳ ತಜ್ಞ ಮೋಹನ್ ಮಣಿ, ಪ್ರೊ. ರಾಜೇಶ್, ಪ್ರೊ. ಬಾಬು ಮ್ಯಾಥ್ಯೂ, ಪ್ರೊ. ರಾಜೇಂದ್ರನ್, ಪ್ರೊ. ಕರುಣಾ ಮತ್ತಿತರರು ಉಪಸ್ಥಿತರಿದ್ದರು.