ʼಭ್ರಷ್ಟರು ಪಾತಾಳದಲ್ಲಿದ್ದರೂ ಮೋದಿ ಸರಕಾರ ಬಿಡುವುದಿಲ್ಲ’ : ಪ್ರತಾಪ ಸಿಂಹ ಪೋಸ್ಟ್
"ಭ್ರಷ್ಟರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡು ಅಧಿಕಾರ ಹಂಚಿಕೊಂಡಿರುವುದನ್ನು ದೇಶವೇ ನೋಡಿದೆ" ಎಂದ ಜನರು
ಬೆಂಗಳೂರು : ಪಾತಾಳದಲ್ಲಿ ಅಡಗಿದ್ದರೂ, ವಿದೇಶಕ್ಕೆ ಓಡಿಹೋದರೂ ಭ್ರಷ್ಟರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಿಡುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ ಸಿಂಹ ಅವರ ಪೋಸ್ಟ್ ನಲ್ಲಿ ಏನಿದೆ ? :
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿರುವ ಪ್ರತಾಪ ಸಿಂಹ, ʼಪಾತಾಳದಲ್ಲಿ ಅಡಗಿದ್ದರೂ, ವಿದೇಶಕ್ಕೆ ಓಡಿಹೋದರೂ ಭ್ರಷ್ಟರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಿಡುವುದಿಲ್ಲ. 2019ರಿಂದ 2026ರವರೆಗೆ 274 ದೇಶಭ್ರಷ್ಟರನ್ನು ಭಾರತಕ್ಕೆ ಕರೆತರಲಾಗಿದೆ. ಸುಮಾರು 17,874 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, 18,762 ಕೋಟಿ ರೂ. ಮೊತ್ತವನ್ನು ಮರುಪಡೆಯಲಾಗಿದೆ. ಇದು ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕ್ರಮವಾಗಿದ್ದು, ದೇಶದ ಹಣ ದೋಚಿದವರು ಕಾನೂನಿಗೆ ತಲೆಬಾಗಲೇಬೇಕುʼ ಎಂದು ಬರೆದುಕೊಂಡಿದ್ದಾರೆ.
ಪ್ರತಾಪ ಸಿಂಹ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ಕುರಿತು ಪ್ರತಿಕ್ರಿಯಿಸದ ವಸಂತ ಕುಮಾರ್ ಎಂಬುವವರು, “ಇರೋಬರೋ ಭ್ರಷ್ಟರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡು ಅವರೊಂದಿಗೆ ಅಧಿಕಾರ ಹಂಚಿಕೊಂಡಿರುವುದನ್ನು ದೇಶವೇ ನೋಡಿದೆ” ಎಂದು ಟೀಕಿಸಿದ್ದಾರೆ.
ಸುರೇಶ್ ಎನ್ ಎಂಬುವವರು, “ಸರ್ಕಾರ ಕ್ರಮ ಕೈಗೊಂಡಿದೆ ಎಂಬುದು ಒಂದು ವಿಷಯ. ಆದರೆ ಎಲ್ಲ ಭ್ರಷ್ಟರನ್ನು ಹಿಡಿದಿದೆ ಎನ್ನುವುದಕ್ಕೆ ಇದೊಂದೇ ಸಾಕ್ಷಿಯಾಗುವುದಿಲ್ಲ. ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದ ಪ್ರಮುಖ ಆರ್ಥಿಕ ಅಪರಾಧಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳು ಹಲವು ವರ್ಷಗಳಿಂದ ಮುಂದುವರಿದಿವೆ. ಹೀಗಾಗಿ ಸರ್ಕಾರ ಕ್ರಮ ಕೈಗೊಂಡಿದೆ ಎನ್ನುವುದು ಒಂದು ವಿಷಯ, ಎಲ್ಲ ಭ್ರಷ್ಟರನ್ನೂ ಹಿಡಿದಿದೆ ಎನ್ನುವುದು ಮತ್ತೊಂದು ವಿಷಯ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಹಂತೇಶ್ ಜಮಾದಾರ್ ಎಂಬುವವರು, “ನಿಮ್ಮ ಪಕ್ಷದಲ್ಲೇ ಭ್ರಷ್ಟರನ್ನು ಸೇರಿಸಿಕೊಳ್ಳಲಾಗಿದೆ. ಹೊರಗಿನವರನ್ನು ಹಿಡಿದು ಏನು ಪ್ರಯೋಜನ?” ಎಂದು ಪ್ರಶ್ನಿಸಿದ್ದಾರೆ.
ವೀಣಾಮಧು ಪ್ರಿಯಾ ಎಂಬುವವರು, “ಪಿಎಂ ಕೇರ್ಸ್ ಫಂಡ್ ಬಗ್ಗೆ ಏನು?” ಎಂದು ಪ್ರಶ್ನಿಸಿದ್ದಾರೆ.
Calm Shishya ಎಂಬುವವರು, “ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲ (ಹಿಡಿದು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ). ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ (ಎಲ್ಲರನ್ನೂ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ). ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ (ಎಲ್ಲರಿಗೂ ಕ್ಲೀನ್‌ಚಿಟ್ ಕೊಡುತ್ತೇವೆ)” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ, ಜಯಸಿಂಹ ಎನ್. ಶ್ರೀಧರ್ ಎಂಬುವವರು, “ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಪ್ರತಾಪ್ ಸಿಂಹ ಇದ್ದರೆ ರಾಜ್ಯ ನಂಬರ್ 1 ಆಗುತ್ತದೆ” ಎಂದು ಹೇಳಿದ್ದಾರೆ.
ಸುಭಾಷ್ ಮೆಲಿನಮನಿ ಎಂಬುವವರು, “ನಿಮಗಿಂತ ದೊಡ್ಡ ಕಳ್ಳರು ಯಾರಿದ್ದಾರೆ? ರಾಮನ ಹುಂಡಿ ಕಳ್ಳರ ಬಗ್ಗೆ ಹೇಳಿ” ಎಂದು ಟೀಕಿಸಿದ್ದಾರೆ.
ಸೂರಿ ಗೋವಿಂದ್ ಅತ್ತಿಗೋಡು ಎಂಬುವವರು, “ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಅಬು ಮನ್ನಾನ್ ಮಬಿಯಾ ಎಂಬುವವರು, “ನೀರವ್ ಮೋದಿ ಮತ್ತು ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತಂದ ಮೋದೀಜಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಕೆಲಸ ಬೇರೆ ಯಾವುದೇ ಸರ್ಕಾರದಿಂದ ಸಾಧ್ಯವಾಗುತ್ತಿರಲಿಲ್ಲ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ರೆಡ್ಡಿ ಎಂಬುವವರು, “ಅಷ್ಟು ಜನ ಈಗ ಬಿಜೆಪಿಯಲ್ಲೇ ಇದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಝುಬೈರ್ ಅಹ್ಮದ್ ಎಂಬುವವರು, “ಇಂತಹ ಸುಳ್ಳು ಪೋಸ್ಟ್ ಹಾಕಿಕೊಂಡು ಅಂಧಭಕ್ತರನ್ನು ಖುಷಿಪಡಿಸಿ” ಎಂದು ಟೀಕಿಸಿದ್ದಾರೆ.
ಪ್ರವೀಣ್ ಸನೂರ್ ಎಂಬುವವರು, “ಒಳ್ಳೆಯ ಕೆಲಸ. ಆದರೆ ದೇಶದೊಳಗಿರುವ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಮಾತ್ರ ತಪ್ಪು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.