ಕೆಪಿಎಸ್‍ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ; ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಧರಣಿ
ಬೆಂಗಳೂರು : ಕೆಪಿಎಸ್‍ಸಿ ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಕರ್ನಾಟಕ ಲೋಕಸೇವಾ ಆಯೋಗವು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಲುವಾಗಿ 2024ರ ಜು.29ರಂದು ಅಧಿಸೂಚನೆ ಹೊರಡಿಸಿ, ಸ್ಪರ್ಧಾತ್ಮಕ ಪರೀಕ್ಷೆ ನಡೆದು 2026ರ ಜುಲೈ ತಿಂಗಳಿನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಅದರಲ್ಲಿ ಕೆಪಿಎಸ್‍ಸಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿತ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಧರಣಿನಿರತರು ಆರೋಪಿಸಿದರು.
ಹಲವು ಅಭ್ಯರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನವೇ ಅಕ್ರಮದ ಸಿದ್ಧತೆ ನಡೆಸಿ, ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆಯಲ್ಲಿ ನೀಡಿದ ಒಎಂಆರ್ ಪ್ರತಿಯಲ್ಲಿ ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೇ, ಖಾಲಿ ಒಎಂಆರ್ ಪ್ರತಿಯನ್ನು ನೀಡಿರುವುದನ್ನು ಕೆಲ ಅಭ್ಯರ್ಥಿಗಳು ಗಮನಿಸಿರುತ್ತಾರೆ. ಮೇ.26ರಂದು ಪ್ರಕಟಗೊಂಡ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸದರಿ ಅಭ್ಯರ್ಥಿಗಳೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು ಒಎಒಆರ್ ಟ್ಯಾಂಪರಿಂಗ್ (ತಿದ್ದುಪಡಿ) ನಡೆದಿರುವ ಅನುಮಾನವಿದೆ ಎಂದು ಆರೋಪಿಸಿದರು.
ನೇಮಕಾತಿಯಲ್ಲಿನ ಎಲ್ಲ ಅನುಮಾನಗಳ ಕುರಿತು ಕೂಲಂಕುಶ, ಪಾರದರ್ಶಕ, ಪಕ್ಷಪಾತವಿಲ್ಲದ ತನಿಖೆಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಧರಣಿಯಲ್ಲಿ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಕಾಂತಕುಮಾರ್, ವೈದ್ಯರಾದ ಡಾ.ಪ್ರಮೋದ್, ಡಾ.ಚಂದನ್, ಡಾ.ಸಾಗರ್, ಡಾ.ವಿನಾಯಕ್, ಡಾ.ಸಚಿನ್ ಮತ್ತಿತರರು ಹಾಜರಿದ್ದರು.