ಹಣ ಪಡೆದು ಸಚಿವ ಸ್ಥಾನ ಹಂಚಿಕೆ ಆರೋಪ; ಆಡಿಯೋ ಬಿಡುಗಡೆ ಮಾಡಿದ ಛಲವಾದಿ ನಾರಾಯಣಸ್ವಾಮಿ

‘ನಾಗೇಂದ್ರ ರಾಜೀನಾಮೆ ಕೊಡದಿದ್ದರೆ ಸದನ ನಡೆಸಲು ಬಿಡೆವು’

Update: 2026-08-05 20:08 IST

ಬೆಂಗಳೂರು : ಸಂಪುಟ ವಿಸ್ತರಣೆ ಆಡಳಿತ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ. ಈ ಮಧ್ಯೆ ‘ಹಣ ಪಡೆದು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ’ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ್ ಅವರ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

ಬುಧವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ತಿಮ್ಮಾಪುರ ಮತ್ತು ಮಾಜಿ ಶಾಸಕ ನಂಜಯ್ಯನಮಠ ಕಾರಿನಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ ಎಂದರು.

‘ಇವರ ಬಳಿ ಹಣ ಇಲ್ಲ, ಪ್ರಾಮಾಣಿಕರಿದ್ದಾರೆ’ ಎಂದು ಕೆ.ಸಿ.ವೇಣುಗೋಪಾಲ್‍ಗೆ ತಿಳಿಸಿದಾಗ, ‘ಹಣ ಮಾಡದೇ ಪ್ರಾಮಾಣಿಕರಾಗಿ ಇರಿ ಎಂದು ನಿಮಗೆ ಯಾರು ಹೇಳಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ‘ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರಿಗಳನ್ನು ಉತ್ಪತ್ತಿ ಮಾಡುವವರು ಎಂಬುದು ಇದರಿಂದ ಸಾಬೀತಾಗಿದೆ. ಇವರು ದೇಶ ಉದ್ಧಾರ ಮಾಡಲು ಅಧಿಕಾರಕ್ಕೆ ಬಂದಿಲ್ಲ, ಬದಲಿಗೆ ಇರುವ ದೇಶ ಲೂಟಿ ಮಾಡುವವರು ಇವರು’ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

‘ಸಂಪುಟ ವಿಸ್ತರಣೆ ವೇಳೆ ಎಂತೆಂತಹ ಸಚಿವರನ್ನು ಆಯ್ಕೆ ಮಾಡಿದ್ದಾರೆಂದರೆ ಇವರಿಗೆ ಕನ್ನಡವೂ ಬರುವುದಿಲ್ಲವೇ?. ಹಲವರಿಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿಲ್ಲ, ಇಂತಹವರನ್ನೆಲ್ಲ ಇವರು ಸಚಿವರನ್ನಾಗಿ ಮಾಡಿದ್ದಾರೆ. ನಿಮಗೆ ಭಾಷೆ ಬಾರದೇ ಇದ್ದರೆ ಪರವಾಗಿಲ್ಲ, ಸರಿಯಾಗಿ ಲೂಟಿ ಮಾಡಲು ಬಂದರೆ ಸಾಕೆಂಬ ಉದ್ದೇಶವೇ?. ಭ್ರಷ್ಟರನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಸದನ ನಡೆಸಲು ಬಿಡೆವು: ‘ನೂತನ ಸಚಿವ ಬಿ.ನಾಗೇಂದ್ರರ ಮೇಲೆ ಕೋರ್ಟಿನಲ್ಲಿ ಪ್ರಕರಣವಿದೆ. ಅವರು ದಿಲ್ಲಿಗೆ ತೆರಳುವಂತಿಲ್ಲ. ಇಂತಹ ಕಳಂಕಿತರು ಸಚಿವ ಸಂಪುಟದಲ್ಲಿರಲು ಸಾಧ್ಯವಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ. ಆ.13ರಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಅವರ ರಾಜೀನಾಮೆ ಇಲ್ಲದೆ ಸದನ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ವಾಲ್ಮೀಕಿ ನಿಗಮದಲ್ಲಿ 187ಕೋಟಿ ರೂ.ಹಣ ದುರುಪಯೋಗ ಪಡಿಸಿಕೊಂಡ ಬಿ.ನಾಗೇಂದ್ರ, ಬಿಜೆಪಿಯ ಹೋರಾಟದ ಫಲವಾಗಿ ರಾಜೀನಾಮೆ ನೀಡಿ, ಜೈಲಿಗೆ ಹೋಗಿದ್ದರು. ಇಂದಿಗೂ ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನಿನಲ್ಲಿ ಇದ್ದರೂ ಕಾಂಗ್ರೆಸ್ ಪಕ್ಷ ಅವರಿಗೆ ಮಂತ್ರಿ ಸ್ಥಾನವನ್ನು ಉಡುಗೊರೆಯಾಗಿ ನೀಡಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.

ರಾಜೀನಾಮೆ ಕೇಳಿದ್ದು ಸಲ್ಲ: ಸಲೀಂ ಅಹ್ಮದ್ ಸಭಾಪತಿ ಭೇಟಿ ಮಾಡಿ ರಾಜೀನಾಮೆ ಕೇಳಿದ್ದಾರೆ. ರಾಜೀನಾಮೆ ಕೇಳಲು ಅವರು ಯಾರು. ವಿಧಾನಸಭೆ ಅವಧಿ 5 ವರ್ಷ. ವಿಧಾನ ಪರಿಷತ್ ಯಾವತ್ತೂ ವಿಸರ್ಜನೆ ಆಗುವುದಿಲ್ಲ. ಅವರಾಗಿ ಸಭಾಪತಿ ರಾಜೀನಾಮೆ ಕೊಟ್ಟರೆ ಆ ಸ್ಥಾನ ಖಾಲಿ ಆಗುತ್ತದೆ. ಸಭಾಪತಿ ಸ್ಥಾನವು ಪಕ್ಷದ ಆಸ್ತಿಯೇ?. ಕಾಂಗ್ರೆಸ್ಸಿಗೆ ನೀತಿ, ತತ್ವ ಇಲ್ಲವೇ? ಎಂದು ಅವರು ಟೀಕಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News