×
Ad

ಚನ್ನರಾಯಪಟ್ಟಣ ಭೂಸ್ವಾಧೀನ ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸುವಂತೆ ರೈತರ ಆಗ್ರಹ

Update: 2025-09-21 20:54 IST

ಬೆಂಗಳೂರು, ಸೆ.21: ಸರಕಾರವು ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ 2 ತಿಂಗಳು ಕಳೆದಿದ್ದರೂ, ಅಧಿಕೃತ ಡಿನೋಟಿಫಿಕೇಶನ್ ಆದೇಶ ಹೊರಡಿಸುವಂತೆ ಚನ್ನರಾಯಪಟ್ಟಣ ರೈತರು ಆಗ್ರಹಿಸಿದ್ದಾರೆ.

ರವಿವಾರ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ವತಿಯಿಂದ ದೇವನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಹೋರಾಟಗಾರ ಕಾರಳ್ಳಿ ಶ್ರೀನಿವಾಸ್, ಚನ್ನರಾಯಪಟ್ಟಣ ರೈತರು, ಸಂಯುಕ್ತ ಹೋರಾಟ-ಕರ್ನಾಟಕ, ಮತ್ತು ಸಮಾನ ಮನಸ್ಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.25ರಂದು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿದ್ದರು. ಈ ನಿರ್ಧಾರ ದೇಶಾದ್ಯಂತ ಸುದ್ದಿಯಾಗಿತ್ತು. ಸರಕಾರವು ರೈತಪರ ನಿಲುವು ತೆಗೆದುಕೊಂಡಿದ್ದಾಗಿ ಪ್ರಚಾರ ಪಡೆದಿತ್ತು ಎಂದು ನೆನಪಿಸಿದರು.

ಘೋಷಣೆಯಾಗಿ ತಿಂಗಳುಗಳು ಕಳೆದರೂ ಸರಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಇದರ ಬದಲಾಗಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಎರಡು ಹಳ್ಳಿಗಳ 439 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಗೆ ಸಭೆ ಕರೆಯಲಾಗಿದೆ ಎಂದು ನೋಟೀಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿತ್ತು. ರೈತರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶಕ್ಕೆ ಬೆಲೆ ನೀಡದವರನ್ನು ಹೇಗೆ ನಂಬುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಮಾತನಾಡಿ, ಸಂಯುಕ್ತ ಹೋರಾಟದ ಮುಂಖಂಡರು ಈ ವಿಷಯವನ್ನು ಈಗಾಗಲೇ ಸರಕಾರದ ಗಮನಕ್ಕೆ ತಂದಿದ್ದಾರೆ. ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಆದರೆ ದಸರಾ ಹಬ್ಬ ಮತ್ತಿತರ ಕಾರಣಗಳಿಂದ ಭೇಟಿ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ದಸರಾ ಮುಗಿಯುವವರೆಗೆ ಕಾಯೋಣ, ಆ ನಂತರ ನಮ್ಮ ಹೋರಾಟವನ್ನು ತೀವ್ರಗೊಳಿಸೋಣ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರ ತೇಜಸ್ವಿ ಮಾತನಾಡಿ, ರೈತರು ತಮ್ಮ ತಮ್ಮ ಊರುಗಳಲ್ಲಿ ಮತ್ತೊಮ್ಮೆ ಸಂಘಟಿತರಾಗಿ, ಹೋರಾಟವನ್ನು ಚುರುಕುಗೊಳಿಸಬೇಕು. ಯಾವುದೇ ಸಂದರ್ಭದಲ್ಲಿ ತಕ್ಷಣಕ್ಕೆ ಎಲ್ಲ ರೀತಿಯ ಹೋರಾಟಕ್ಕೆ ಸಜ್ಜಾಗಿರಬೇಕು. ಈ ಬಾರಿ ಹಿಂದಿಗಿಂತಲೂ ಉಗ್ರವಾದ ಹೋರಾಟ ರೂಪುಗೊಳ್ಳಲಿದೆ ಎಂದರು.

ಸರಕಾರ ಆದಷ್ಟು ಬೇಗ ಡಿನೋಟಿಫಿಕೇಶನ್ ಆದೇಶ ಹೊರಡಿಸಬೇಕು. ಇಲ್ಲವಾದರೆ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ರೈತರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಹೋರಾಟಗಾರ ಮಳ್ಳೂರು ಹರೀಶ್, ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವಥಪ್ಪ, ಶ್ರೀನಿವಾಸ್, ಸುಬ್ರಹ್ಮಣಿ, ನಂದೀಶ್, ನಂದನ್, ಗೋಪಿನಾಥ್, ಮುನಿವೆಂಕಟಮ್ಮ, ಲಕ್ಷ್ಮಮ್ಮ, ಮೋಹನ್, ವೆಂಕಟೇಶ್, ಪಿಳ್ಳಣ್ಣ, ಮರಿಯಣ್ಣ, ಲಕ್ಷ್ಮಣ್ಣ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News