ಬರ ನಿರ್ವಹಣೆಗೆ ಸರಕಾರದಿಂದ ಸಕಲ ಸಿದ್ಧತೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜು.6 : ನಾವು ಬರಗಾಲ ಎದುರಿಸಬೇಕಾದ ಸಂದರ್ಭ ಬಂದಿದೆ. ಈಗಾಗಲೇ ನಾನು ಮತ್ತು ಮುಖ್ಯಮಂತ್ರಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಸೇರಿದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ಮತ್ತು ನಿರ್ದೇಶನಗಳನ್ನು ನೀಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ವಿಧಾನಸೌಧದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಚರ್ಚಿಸಿದ್ದೇನೆ. ಜಲಾಶಯಗಳು ಡೆಡ್ ಸ್ಟೋರೇಜ್ಗೆ ತಲುಪಿರುವುದರಿಂದ ನೀರನ್ನು ಎಚ್ಚರಿಕೆಯಿಂದ ಬಳಸಬೇಕು. ಲಭ್ಯವಿರುವ ನೀರನ್ನು ಕುಡಿಯಲು ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಉದ್ದೇಶಕ್ಕೆ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು.
ರವಿವಾರ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಹೀಗೆಯೇ ಇನ್ನೊಂದೆರಡು ದಿನ ಮಳೆಯಾದರೆ ಜಲಾಶಯಗಳು ಸ್ವಲ್ಪ ಮಟ್ಟಿಗಾದರೂ ತುಂಬಬಹುದು. ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್ಎಸ್ ಗೆ ಒಳ ಹರಿವು ಆರಂಭವಾಗಿದೆ. ಜಲಾಶಯಗಳಲ್ಲಿ ಒಂದು ಮಟ್ಟಿಗಾದರೂ ನೀರು ತುಂಬಿದರೆ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.
ನಾನು ಮತ್ತು ಮುಖ್ಯಮಂತ್ರಿ ಇಂದು ಬೀದರ್ಗೆ ಹೋಗುತ್ತಿದ್ದೇವೆ. ಅಲ್ಲಿಂದ ನಾಳೆ ಕಲಬುರಗಿ ಜಿಲ್ಲೆಗೆ ತೆರಳಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದೇವೆ. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತೇನೆ ಎಂದರು.
ಜಾನುವಾರುಗಳಿಗೆ ಮೇವಿನ ಕಿಟ್ ಗಳ ಸಮಸ್ಯೆಯಾಗದಂತೆ ಈಗಾಗಲೇ ಮೇವು ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಬೋರ್ವೆಲ್ ಇರುವವರಿಗೆ ಬೀಜ ಕೊಟ್ಟರೆ ಮೇವು ಬೆಳೆದು ಕೊಡುತ್ತಾರೆ. ಅವಶ್ಯಕತೆ ಕಂಡುಬಂದಲ್ಲಿ ಮೇವು ಬ್ಯಾಂಕ್, ಗೋಶಾಲೆಗಳನ್ನು ನಿರ್ಮಿಸುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಸರ್ವ ಸಿದ್ಧತೆಗಳೊಂದಿಗೆ ಬರಗಾಲವನ್ನು ಎದುರಿಸಲು ಸರ್ಕಾರ ತಯಾರಿಯನ್ನು ಮಾಡಿಕೊಳ್ಳುತ್ತಿದೆ ಎಂದು ಮಾಧ್ಯಮಕ್ಕೆ ವಿವರಿಸಿದರು.
ಇನ್ನೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ನಾವು ವರದಿಯನ್ನು ಸಲ್ಲಿಸುತ್ತೇವೆ. ಎನ್ಡಿಆರ್ಎಫ್ ಹಣವನ್ನು ಮುಂಚಿತವಾಗಿ ನೀಡುವಂತೆ ಒತ್ತಾಯಿಸುತ್ತೇವೆ. ಸಾಧ್ಯವಾದರೆ, ನಾನೇ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ, ಪರಿಸ್ಥಿತಿಯ ಬಗ್ಗೆ ವಿವರಿಸಿ, ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಚುನಾವಣಾ ಆಯೋಗದ ಸೂಚನೆಯಂತೆ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ. ಚುನಾವಣಾ ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರಿಗಳೇನಾದರೂ ತಪ್ಪು ಮಾಡಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.