ಬೆಂಗಳೂರು : ರಾಜ್ಯದ ವೈವಿಧ್ಯಮಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವುದೇ ‘ಕರ್ನಾಟಕ ಪರ್ವದ’ ಮೂಲ ಉದ್ದೇಶ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಶನಿವಾರ ನಗರದ ಅರಮೆನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪರ್ವ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಪಾಕ ವೈವಿಧ್ಯತೆ ಹಾಗೂ ಸೃಜನಶೀಲತೆಯ ಅನಾವರಣಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಕಲಾವಿದರು, ಕುಶಲಕರ್ಮಿಗಳು, ಉದ್ಯಮಿಗಳು, ಆಹಾರ ತಯಾರಕರು ಮತ್ತು ಸಾಂಸ್ಕೃತಿಕ ತಂಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಒಟ್ಟು 200 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿವಿಧ ಜಿಲ್ಲೆಗಳ ವಿಶಿಷ್ಟ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು, ಸ್ಥಳೀಯ ಉತ್ಪನ್ನಗಳು, ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಕರ್ನಾಟಕ ಪರ್ವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಆಹಾರ ಮೇಳದಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ಹಾಗೂ ಪ್ರಾದೇಶಿಕ ಖಾದ್ಯಗಳ ವೈವಿದ್ಯಮಯ ರುಚಿಯನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕರ್ನಾಟಕದ ಸಂಗೀತ, ನೃತ್ಯ, ಜಾನಪದ ಕಲೆಗಳು, ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರಕಾರಗಳನ್ನು ಅನಾವರಣಗೊಳಿಸಲಾಗುವುದು. ಇದರೊಂದಿಗೆ, ಸಮಕಾಲೀನ ಹಾಗೂ ಪ್ರಸ್ತುತ ವಿವಿಧ ವಿಷಯಗಳ ಕುರಿತು ಉದ್ಯಮ ಕ್ಷೇತ್ರದ ತಜ್ಞರು ಹಾಗೂ ಗಣ್ಯ ವೃತ್ತಿಪರರ ನೇತೃತ್ವದಲ್ಲಿ ಪ್ಯಾನಲ್ ಚರ್ಚೆಗಳನ್ನು ಆಯೋಜಿಸಲಾಗುವುದು. ಈ ಚರ್ಚೆಗಳು ಜ್ಞಾನ ವಿನಿಮಯ, ವಿಚಾರ ವಿನಿಮಯ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆಯಾಗಲಿವೆ ಎಂದು ಯು.ಟಿ.ಖಾದರ್ ತಿಳಿಸಿದರು.

‘ಕರ್ನಾಟಕ ಪರ್ವ’ ಕಾರ್ಯಕ್ರಮದಲ್ಲಿ ಅಂತರಾಜ್ಯ ಸೌಹಾರ್ದದ ಸಂಕೇತವಾಗಿ ಕರ್ನಾಟಕ ಪರ್ವ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಕೇರಳಂನ ಉನ್ನತ ಶಿಕ್ಷಣ ಸಚಿವ ರೋಜಿ ಎಂ.ಜಾನ್, ಕರ್ನಾಟಕದ ಸಂಪತ್ತನ್ನು ಸಂಭ್ರಮಿಸೋಣ, ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದಕ್ಕೆ ‘ಕರ್ನಾಟಕ ಪರ್ವ’ ಕಾರ್ಯಕ್ರಮವು ಉದಾಹರಣೆಯಾಗಿದೆ. ಪ್ರಾದೇಶಿಕ ಬೆಳವಣಿಗೆಗೆ ಸರಕಾರ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ಈ ಕಾರ್ಯಕ್ರಮದಿಂದ ತಿಳಿದುಬರುತ್ತದೆ ಎಂದರು.

ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ತಮ್ಮ ಕೌಶಲ್ಯತೆಯನ್ನು ಬಳಸಿಕೊಂಡು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಒಂದು ವೇದಿಕೆ ಸೃಷ್ಟಿ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಕೌಶಲ್ಯತೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ವೃದ್ಧಿಪಡಿಸಿಕೊಳ್ಳಬಹುದಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪರಿಷತ್ ಸಭಾಪತಿ ಸಲೀಂ ಅಹ್ಮದ್, ಸಚಿವ ರಿಝ್ವಾನ್ ಅರ್ಶದ್, ಸಂಸದ ಮನ್ಸೂರ್ ಅಲಿಖಾನ್, ಸೈಯದ್ ನಾಸೀರ್ ಹುಸೇನ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮೆಹರೋಝ್ ಖಾನ್, ಶಾಸಕರಾದ ಖನೀಜ್ ಫಾತೀಮಾ, ರಹೀಂ ಖಾನ್, ಪಠಾಣ್ ಯಾಸೀನ್ ಅಹಮದ್ ಖಾನ್, ತೆಲಂಗಾಣದ ಸಚಿವ ಮೊಹಮದ್ ಅಝರುದ್ದೀನ್, ಹಜ್ ಮತ್ತು ವಕ್ಫ್ ಇಲಾಖೆಯ ನಿರ್ದೇಶಕ ಯಾಸ್ಮಿನ್ ಜಿ.ವಾಲಿಕಾರ, ನಟಿ ರಮ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor