×
Ad

ದ್ವೇಷ ಭಾಷಣ ಪ್ರಕರಣ | ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ : ಹೈಕೋರ್ಟ್

Update: 2026-01-23 14:30 IST

ಕಲ್ಲಡ್ಕ ಪ್ರಭಾಕರ ಭಟ್

ಬೆಂಗಳೂರು: ಪುತ್ತೂರಿನ ಉಪ್ಪಳಿಗೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಪುತ್ತೂರು ಗ್ರಾಮೀಣ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣ ಸಂಬಂಧ ಈಶ್ವರಿ ಪದ್ಮುಂಜ ಎಂಬುವರು ನೀಡಿರುವ ದೂರು ಹಾಗೂ ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಡಾ ಪ್ರಭಾಕರ ಭಟ್ (83) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್ ಅವರು, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾಡಿದ್ದಾರೆನ್ನಲಾದ ಸಂಪೂರ್ಣ ಭಾಷಣದ ಪ್ರತಿಲಿಪಿಯನ್ನು (Transcript) ನ್ಯಾಯಪೀಠಕ್ಕೆ ಸಲ್ಲಿಸಿದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಆಸ್ಮಾ ಕೌಸರ್ ಸಹ 42 ನಿಮಿಷಗಳ ಭಾಷಣದ ವಿಡಿಯೊ ಒಳಗೊಂಡ ಪೆನ್‌ಡ್ರೈವ್ ಅನ್ನು ನ್ಯಾಯಾಲಯಕ್ಕೆ ಒದಗಿಸಿದರು.

ಅದನ್ನು ಸ್ವೀಕರಿಸಿದ ನ್ಯಾಯಪೀಠ, ಭಾಷಣವನ್ನು ಪರಿಶೀಲಿಸಿದ ಬಳಿಕ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಪುತ್ತೂರು ಗ್ರಾಮೀಣ ಪೊಲೀಸರಿಗೆ ನಿರ್ದೇಶಿಸಿತು.

ಈ ವೇಳೆ ಆಸ್ಮಾ ಕೌಸರ್ ಅವರು, ಅರ್ಜಿದಾರರು ಈಗಾಗಲೇ ಜಾಮೀನಿನ ಮೇಲಿದ್ದು, ಅವರ ವಿರುದ್ಧ ಬಲವಂತದ ಕ್ರಮವೇನೂ ಕೈಗೊಳ್ಳುವುದಿಲ್ಲ. ಆದರೆ, ನಿನ್ನೆಯೂ ಸಹ ಅರ್ಜಿದಾರರ ವಿರುದ್ಧ ಇಂಥದೇ ಆರೋಪದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದು ನಿಲ್ಲುವಂತೆ ಕಾಣುತ್ತಿಲ್ಲ. ಅರ್ಜಿದಾರರು ಜಾಮೀನು‌ ಷರತ್ತುಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ನ್ಯಾಯಪೀಠ, ಜಾಮೀನು ಷರತ್ತುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದಾದರೆ, ಜಾಮೀನು ರದ್ದು ಕೋರಿ ನೀವು ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು? :

ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಗೆ 2025ರ ಅ. 25ರಂದು ದೂರು ನೀಡಿದ್ದ ಈಶ್ವರಿ ಪದ್ಮುಂಜ ಎಂಬುವರು, ದೀಪಾವಳಿ ಹಬ್ಬದ ಪ್ರಯುಕ್ತ ಅ.20ರಂದು ಉಪ್ಪಳಿಗೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಮಹಿಳೆಯರನ್ನು ಅಪಮಾನಿಸುವ ಹಾಗೂ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿ ಸಾರ್ವಜನಿಕವಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ದೀಪೋತ್ಸವ ಕಾರ್ಯಕ್ರಮಕ್ಕೆ ಸಂಬಂಧಪಡದ ಹಿಂದು-ಮುಸ್ಲಿಂ ಮಹಿಳೆಯರ ಮಕ್ಕಳ‌ ಹೆರುವಿಕೆ ವಿಚಾರ, ಅಲ್ಲಾಹುವಿಗಾಗಿ ಮಕ್ಕಳನ್ನು ಹುಟ್ಟಿಸುವಿಕೆ, ಮಹಾಲಿಂಗೇಶ್ವರನಿಗಾಗಿ ಮಕ್ಕಳನ್ನು ಹುಟ್ಟಿಸುವಿಕೆ ಎಂಬೆಲ್ಲ ಪದಗಳನ್ನು ಭಾಷಣದಲ್ಲಿ ಬಳಸಿದ್ದಾರೆ. ಮಹಿಳೆಯರ ಘನತೆಗೆ ಹಾನಿಯುಂಟು ಮಾಡುವ ಜತೆಗೆ ಹಿಂದು-ಮುಸ್ಲಿಮರ ನಡುವೆ ವೈಷಮ್ಯ ಬೆಳೆಸುವಂಥ ಮಾತುಗಳನ್ನಾಡಿದ್ದಾರೆ. ಆದ್ದರಿಂದ, ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಕೋರಿದ್ದರು. ಈ ದೂರು ಆಧರಿಸಿ ಪ್ರಭಾಕರ ಭಟ್ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ರದ್ದುಕೋರಿ ಪ್ರಭಾಕರ ಭಟ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಕುರಿತು ಜ.19ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರಕ್ಕೆ (ಪುತ್ತೂರು ಗ್ರಾಮೀಣ ಠಾಣೆ ಪೊಲೀಸರು) ನೋಟಿಸ್ ಜಾರಿಗೊಳಿಸಿ, ದೂರುದಾರೆ ಈಶ್ವರಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿತ್ತು. ಜತೆಗೆ, ಪ್ರಭಾಕರ ಭಟ್ ಅವರು ಮಾಡಿದ್ದರೆನ್ನಲಾದ ಭಾಷಣದ ಸಂಪೂರ್ಣ ಟ್ರಾನ್ಸ್ಕ್ರಿಪ್ಟ್ ಸಲ್ಲಿಸುವಂತೆ ಸೂಚಿಸಿದ್ದ ನ್ಯಾಯಪೀಠ, ಕೋರ್ಟ್ ಅನುಮತಿಯಿಲ್ಲದೆ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಸರ್ಕಾರಕ್ಕೆ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News