ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಮಾಜಿಕ ಜಾಗೃತಿಯೂ ಬಹಳ ಮುಖ್ಯ : ಸಚಿವ ದಿನೇಶ್ ಗುಂಡೂರಾವ್
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ
ಬೆಂಗಳೂರು: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಹೆಣ್ಣುಮಕ್ಕಳಿಗೆ ಗೌರವ ಹಾಗೂ ಮಾನ್ಯತೆ ನೀಡುವುದು ಸಮಾಜದ ಕರ್ತವ್ಯ ಎಂದು ಹೇಳಿದರು.
ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಆದರೂ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಆಗಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದು, ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ತಿಳಿಸಿದರು.
ಪ್ರಸಕ್ತ ರಾಜ್ಯದಲ್ಲಿ 1000 ಪುರುಷರಿಗೆ 947 ಮಹಿಳೆಯರ ಅನುಪಾತವಿದ್ದು, ಇದನ್ನು ಸರಿಪಡಿಸದಿದ್ದರೆ ಭವಿಷ್ಯದಲ್ಲಿ ಗಂಭೀರ ಸಾಮಾಜಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೇವಲ ಕಾನೂನು ಕ್ರಮಗಳು ಮಾತ್ರ ಸಾಕಾಗುವುದಿಲ್ಲ, ಸಾಮಾಜಿಕ ಜಾಗೃತಿಯೂ ಅಗತ್ಯವಾಗಿದೆ. ಕೆಲವೆಡೆ ಹೆಣ್ಣುಮಕ್ಕಳೇ ಈ ದುಷ್ಪ್ರವೃತ್ತಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಸಚಿವರು ಕರೆ ನೀಡಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗೆ ಹಾಗೂ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ–ಕಾಲೇಜುಗಳಲ್ಲಿ 1ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 2025–26ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ ಒಟ್ಟು 52,02,647 ಹೆಣ್ಣುಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ʼಶುಚಿʼ ಕಾರ್ಯಕ್ರಮದಡಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲಾ–ಕಾಲೇಜುಗಳ 6ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಮತ್ತು ವಿವಿಧ ವಸತಿ ನಿಲಯಗಳಲ್ಲಿರುವ ಒಟ್ಟು 19,64,507 ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ, ʼಮುಟ್ಟಿನ ಕಪ್ʼ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಒಟ್ಟು 9,44,466 ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಒದಗಿಸಲು ಇಲಾಖೆ ಸಜ್ಜಾಗಿದೆ ಎಂದರು.
ಗರ್ಭಕಂಠ ಕ್ಯಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 14 ವರ್ಷದ ಒಂದು ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳಿಗೆ HPV ಲಸಿಕೆ ನೀಡಲಾಗುತ್ತದೆ. ಈ ಯೋಜನೆಯನ್ನು ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಸಚಿವರು ತಿಳಿಸಿದರು.