×
Ad

ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಯತ್ನಿಸಿದ ರೆಡ್ಡಿಯ ಆಟ ರಾಜ್ಯದ ಜನ ಮರೆತಿಲ್ಲ: ಜನಾರ್ಧನ ರೆಡ್ಡಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

Update: 2026-01-23 10:30 IST

ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ಧನ ರೆಡ್ಡಿಗೆ ರಾಜಕೀಯ ಜೀವನದಲ್ಲಿ "ಚಮಚಾಗಿರಿ" ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ ಎಂದು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಗುರುವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಜನಾರ್ಧನಾ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂಬ ಅಮಿತ್‌ ಶಾ ಅವರ ಹೇಳಿಕೆ ಕುರಿತ ಸುದ್ದಿಯನ್ನು ಹಂಚಿಕೊಂಡ ಬಿ.ಕೆ.ಹರಿಪ್ರಸಾದ್, ತಲೆ ಮೇಲೆ ಕೈ ಇರಿಸಿಕೊಂಡಿದ್ದು ಸಾಲದೆಂಬಂತೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಪಾದ ಪೂಜೆಯ ನೀರು ನೆತ್ತಿಗೇರಿರಬೇಕು. ಅಮಿತ್ ಶಾ ತಲೆ ಮೇಲೆ ಕುಟ್ಟಿ ಬಿಜೆಪಿಗೂ ರೆಡ್ಡಿಗೂ ಸಂಬಂಧ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದನ್ನು ಮರೆತಂತಿದೆ ಎಂದು ಹೇಳಿದ್ದಾರೆ.

ಒಮ್ಮೆ ಜೀವದ ಗೆಳೆಯ ಎಂದು ಹೇಳಿಕೊಂಡು, ಮತ್ತೊಮ್ಮೆ ಶ್ರೀರಾಮುಲು ವಿರುದ್ಧವೇ ರಾಜಕೀಯ ಮಸಲತ್ತು ನಡೆಸುವ ಜನಾರ್ಧನ ರೆಡ್ಡಿಯ ರಾಜಕೀಯ ಆಟವನ್ನು ರಾಜ್ಯದ ಜನ ಮರೆತಿಲ್ಲ. ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಯತ್ನಿಸಿದ ರೆಡ್ಡಿಯ ತಂತ್ರಗಾರಿಕೆಗೆ ಯಾವುದೇ ಕಿಮ್ಮತ್ತು ಇಲ್ಲ. ಈ ಕುರಿತು ಶ್ರೀರಾಮುಲು ನೀಡಿರುವ ಹೇಳಿಕೆಗಳೇ ಸಾಕ್ಷಿಯಾಗಿವೆ ಎಂದು ಹೇಳಿದರು.

ರೆಡ್ಡಿಗಾರು ನಾನು ವಾರ್ಡ್ ಚುನಾವಣೆ ಗೆದ್ದಿಲ್ಲ ನಿಜಾ ಆದರೆ, ಹಿಂಬಾಗಿಲೋ ಮುಂಬಾಗಿಲೋ ನಾನಂತೂ ರಾಜಾರೋಷವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಚುನಾವಣೆಯ ಎರಡು ದಿನದ ಹಿಂದಿನ "ಕತ್ತಲೆ ರಾತ್ರಿಯ" ರಹಸ್ಯವಾಗಿಯಂತೂ ಬಂದಿಲ್ಲ ಬರುವುದೂ ಇಲ್ಲ. ಆದರೆ, 224 ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿ, ಹಣದ ಆಧಾರವಿಲ್ಲದೆ ಚುನಾವಣೆ ಎದುರಿಸಲು ನಾವು ಸಿದ್ಧ. ಧೈರ್ಯ ಇದ್ದರೆ ಪ್ರಾಮಾಣಿಕ ಚುನಾವಣೆಗೆ ಮುಂದೆ ಬರಲಿ” ಎಂದು ಸವಾಲು ಹಾಕಿದರು.

ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಸುಳ್ಳು ಕೇಸ್ ಹಾಕಿರೋದಕ್ಕೆ ಹೈಕೋರ್ಟ್ ಕ್ಯಾಕರಿಸಿ ಮುಖಕ್ಕೆ ಉಗ್ದಿದ್ದು ಸಾಕಾಗಿಲ್ವಾ. ನ್ಯಾಯಾಧೀಶರನ್ನೇ ಹತ್ತು ಕೋಟಿ ಡೀಲ್ ಮಾಡಿ ಬೇಲ್ ತೆಗೆದುಕೊಂಡ ಹಾಗೇ ಅನ್ಕೊಂಡ್ರಾ? ಸುಳ್ಳು ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ ಹೋರಾಡುತ್ತಿರುವ ನಮ್ಮ ನಾಯಕರು, ಕೊಲೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದಿಂದ ಗಡಿಪಾರಾಗಿಲ್ಲ ಎಂದು ಟೀಕಿಸಿದರು.

ಅವರಿವರ ಕೈ ಕಾಲು ಹಿಡಿದು ಬಿಜೆಪಿ ಸೇರಿ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿ ಜನಾರ್ಧನ ರೆಡ್ಡಿಗೆ ಬಂದಿದ್ರು, ಶೇಷ-ಅವಶೇಷಗಳ ಬಗ್ಗೆ ಮಾತಾಡೋದು ಹಾಸ್ಯಸ್ಪದ. ಈಗಾಗಲೇ ಜೈಲು, ಡೀಲು, ಬೇಲುಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ, ಮುಂದಿನ ದಿನಗಳಲ್ಲಿ ಇನ್ನೂ ವಿವರವಾಗಿ ಎಲ್ಲವನ್ನೂ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News