‘ಎಚ್‍ಎಂಟಿ ಪುನಶ್ಚೇತನ ಪ್ಯಾಕೇಜ್’ ತಡೆಗೆ ರಾಜ್ಯ ಸರಕಾರದ ಸಂಚು : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ಎಚ್‍ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಗಂಭೀರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‍ಎಂಟಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವ ವಿಚಾರವು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಗಡುವು ವಿಧಿಸಿ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಎಂದರು.
ಎಚ್‍ಎಂಟಿ ವಶದಲ್ಲಿರುವ 430 ಎಕರೆ ಅರಣ್ಯ ಪ್ರದೇಶ ಆಗಿರುವುದರಿಂದ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಬೆಂ.ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರ ಕುಮಾರ್ ಆದೇಶ ನೀಡಿರುವುದು ನ್ಯಾಯಾಂಗ ಕಲಾಪಗಳಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೆ ಈ ಅಧಿಕಾರಿಗೆ ಅಂತಹ ಆದೇಶ ನೀಡುವ ಅಧಿಕಾರ ವ್ಯಾಪ್ತಿಯು ಇರುವುದಿಲ್ಲ. ಈ ಬಗ್ಗೆ ಎಚ್‍ಎಂಟಿ ಕೋರ್ಟ್‍ನಲ್ಲೇ ಪ್ರಶ್ನೆ ಮಾಡಲಿದೆ ಎಂದು ಅವರು ತಿಳಿಸಿದರು.
ನಷ್ಟದ ಸುಳಿಗೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ಎಚ್‍ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಉದ್ದೇಶದಿಂದ ನಾನು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಒಪ್ಪಿಸಿ ವಿಶೇಷ ಪ್ಯಾಕೇಜ್ ತರುವ ಪ್ರಯತ್ನ ಮಾಡುತ್ತಿದ್ದೆ. ಈ ಕಾರ್ಖಾನೆಯು ನಾನು ಸಚಿವನಾಗಿರುವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿರುವಾಗಲೇ ರಾಜ್ಯ ಸರಕಾರ ದುರುದ್ದೇಶದಿಂದ ನೋಟಿಸ್ ಕೊಡಿಸಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ಈ ಭೂಮಿಯು ಸುಮಾರು 15ಸಾವಿರ ಕೋಟಿ ರೂ.ಬೆಲೆ ಬಾಳುತ್ತದೆ ಎಂದು ಈ ಅಧಿಕಾರಿ ಮಹಾಶಯ ಆ ಭೂಮಿಗೆ ಬೆಲೆ ಕಟ್ಟಿದ್ದಾರೆ. ಅಂದ ಮೇಲೆ ಈ ಭೂಮಿಯ ಮೇಲೆ ಯಾರದೋ ಕಾಕದೃಷ್ಟಿ ಬಿದ್ದಿರಬೇಕು ಎಂಬುದು ನನ್ನ ಅನುಮಾನ. ಈಗಾಗಲೇ ಎಚ್‍ಎಂಟಿ ಭೂಮಿಯನ್ನು ಇದೇ ಸರಕಾರದ ಕೃಪೆಯಿಂದ ಅನೇಕರು ಕೊಳ್ಳೆ ಹೊಡೆದಿದ್ದಾರೆ. 175ಎಕರೆ ಭೂಮಿಯು ಯಾವಾಗ ಮಾರಾಟವಾಯಿತು, ಎಲ್ಲಿ ನೋಂದಣಿ ಆಯಿತು ಎನ್ನುವ ಎಲ್ಲ ದಾಖಲೆಗಳು ನನ್ನಲ್ಲಿವೆ. ಆ ಜಾಗದಲ್ಲಿ ಯಾರು ಯಾರು ಮನೆ ಕಟ್ಟಿಕೊಂಡಿದ್ದಾರೆ, ಲೂಟಿ ಹೊಡೆದ ಭೂಮಿಯಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ? ಎಂದು ಅವರು ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಗಿಡ ನೆಡುವುದರಲ್ಲಿ ಹಣ ಲೂಟಿ ಹೊಡೆಯುತ್ತಿರುವ ಬಗ್ಗೆ ಮಾತನಾಡಿದ್ದರು. ಮೊನ್ನೆ-ಮೊನ್ನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರದರ್ಶನ ಮಾಡಿ 15ಲಕ್ಷ ಗಿಡಗಳನ್ನು ನೆಟ್ಟಿರುವದಾಗಿ ಪ್ರಚಾರ ಗಿಟ್ಟಿಸಿದರು. ಅಲ್ಲಿ ಹೋಗಿ ನೋಡಿದರೆ ಭತ್ತದ ಪೈರು ನೆಟ್ಟ ಹಾಗೆ ಗಿಡಗಳನ್ನು ನೆಟ್ಟಿದ್ದಾರೆ. ಇವರು ಅರಣ್ಯ ಸಂರಕ್ಷಣೆ ಮಾಡುವ ಆಸಾಮಿಗಳು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.