ಬಿಜೆಪಿ ಟಿಕೆಟ್ ಕೊಡಿಸಲು ಹಣ ಪಡೆದ ಪ್ರಕರಣ: ಸಂಧಾನಕ್ಕೆ 10 ದಿನ ಕಾಲಾವಕಾಶ ನೀಡಿದ ಹೈಕೋರ್ಟ್
ಬೆಂಗಳೂರು : ಉಡುಪಿಯ ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರೂ. ಪಡೆದ ಆರೋಪ ಪ್ರಕರಣದಲ್ಲಿ ಉಭಯ ಪಕ್ಷಕಾರರು ಸಂಧಾನ ಮಾಡಿಕೊಳ್ಳಲು ಹೈಕೋರ್ಟ್ 10 ದಿನ ಕಾಲಾವಕಾಶ ನೀಡಿದೆ.
ಪ್ರಕರಣದ ತನಿಖೆಯ ವೇಳೆ ಜಪ್ತಿ ಮಾಡಲಾಗಿರುವ ಹಣವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ದೂರುದಾರ ಪೂಜಾರಿ ಹಾಗೂ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ಗೋವಿಂದ ಪೂಜಾರಿ ಪರ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ವಾದ ಮಂಡಿಸಿ, ಪೂಜಾರಿ ಅವರಿಗೆ ತನಿಖೆಯ ವೇಳೆ ಜಪ್ತಿ ಮಾಡಿರುವ ಹಣವನ್ನು ಮಧ್ಯಂತರ ಕಸ್ಟಡಿಯ ರೂಪದಲ್ಲಿ ನೀಡಬೇಕು ಎಂದು ಕೋರಿದ್ದೇವೆ. ಗೋವಿಂದ ಪೂಜಾರಿ ದೂರು ನೀಡಿದ್ದು, ಚೈತ್ರಾ ಮತ್ತಿತರರು ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ತನಿಖೆ ನಡೆಸಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ವಿವಿಧ ವ್ಯಕ್ತಿಗಳಿಂದ ಹಣ ಜಪ್ತಿ ಮಾಡಲಾಗಿದ್ದು, ಆ ಹಣದ ಮಧ್ಯಂತರ ಕಸ್ಟಡಿಯನ್ನು ನಮಗೆ ನೀಡುವಂತೆ ಕೋರಿದ್ದೇವೆ ಎಂದರು.
ಆಗ ನ್ಯಾಯಪೀಠ, ಹಣವನ್ನು ಆರೋಪಿಗಳಿಗೆ ನೀಡಿರುವುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಆರೋಪಿಗಳಿಗೆ ಹಣ ನೀಡಿರುವುದಕ್ಕೆ ಏನು ದಾಖಲೆ ಇದೆ? ಅವರ ಬಳಿ ಬೇರೆ ಹಣ ಇರಬಹುದು. ಆರೋಪ ಪಟ್ಟಿ ಸಲ್ಲಿಸಿರಬಹುದು, ಅವರು ದೋಷಿ ಎಂದು ಸಾಬೀತಾಗಿಲ್ಲ. ದೂರುದಾರರು ಆರೋಪಿಗಳಿಗೆ ನೀಡಿರುವ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ ಎಂದಿತು. ಬಳಿಕ ನ್ಯಾಯಪೀಠ, ಪೂಜಾರಿ ಹಾಗೂ ಸ್ವಾಮೀಜಿ ಅವರಿಗೆ ತಲಾ 50 ಲಕ್ಷ ರೂ. ಗಳನ್ನು ನೀಡೋಣ, ಇಬ್ಬರೂ ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂದು ಹೇಳಿತು.
ಅದಕ್ಕೆ ಪ್ರತಿಕ್ರಿಯಿಸಿದ ಚಂದ್ರಮೌಳಿ ಅವರು, ನಾವು ಆದಾಯ ತೆರಿಗೆ ತೋರಿಸಿದ್ದೇನೆ. ಏನೆಲ್ಲ ದಾಖಲೆ ನೀಡಬೇಕು ಅದೆಲ್ಲವನ್ನೂ ನೀಡಿದ್ದೇವೆ. ಪೂಜಾರಿ ಅವರು ಬ್ಯಾಂಕ್ ಭದ್ರತೆ ನೀಡಲು ಸಿದ್ಧರಿದ್ದಾರೆ. ಎಷ್ಟು ವರ್ಷಗಳ ಕಾಲ ನಾವು ಕಾಯಬೇಕು? ಪೂಜಾರಿ ಅವರು ಶೇ. 24 ಬಡ್ಡಿ ಪಾವತಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ನಿಶ್ಚಿತ ಠೇವಣಿ ಇಡಲಾಗಿದ್ದು, ಶೇ. 6 ಬಡ್ಡಿ ಬರುತ್ತಿದೆ. ಉಳಿದ ಹಣ ಎಲ್ಲಿಂದ ಬರಿಸಬೇಕು? ಮಠದ ಸ್ವಾಮೀಜಿ ಹಣ ಬಿಡುಗಡೆ ಕೋರುತ್ತಿದ್ದಾರೆ. ಅವರು ಹೇಗೆ ಹಣ ಬಿಡುಗಡೆ ಕೇಳುತ್ತಾರೆ? ಸ್ವಾಮೀಜಿ ಹೊರತುಪಡಿಸಿ ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ನಾವು ಹಣ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು.
ಸ್ವಾಮೀಜಿ ಪರ ವಕೀಲ ಸುಯೋಗ್ ಹೇರಳೆ ಅವರು, ಸಂಧಾನ ಮಾತುಕತೆ ನಡೆದಿದೆ. 10 ಲಕ್ಷ ರೂ. ವ್ಯತ್ಯಾಸಕ್ಕೆ ಪೂಜಾರಿ ಅವರು ಒಪ್ಪುತ್ತಿಲ್ಲ. ಹಣ ಬಿಡುಗಡೆ ಮಾಡುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ನಮ್ಮ ವಿರುದ್ಧದ ಪ್ರಕರಣ ರದ್ದತಿಗೆ ಅವರು ಒಪ್ಪುತ್ತಿಲ್ಲ. ಹೆಚ್ಚುವರಿಯಾಗಿ ಬಡ್ಡಿಯ ರೂಪದಲ್ಲಿ 10 ಲಕ್ಷ ಸೇರಿಸಿಕೊಡಬೇಕು ಎನ್ನುತ್ತಿದ್ದಾರೆ ಎಂದರು.
ಇದನ್ನು ಆಲಿಸಿದ ನ್ಯಾಯಪೀಠ, ಗೋವಿಂದ ಪೂಜಾರಿ ಅವರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗದು. ಪ್ರಕರಣ ವಜಾ ಅಥವಾ ಸಂಧಾನ ಯಾವುದು ಬೇಕು ನೋಡಿ. ನಿಮ್ಮ ಹಣ ನಿಮಗೆ ಬರಬೇಕು ಅಷ್ಟೆ. ಸಂಧಾನ ಮಾಡಿಕೊಂಡು ಬನ್ನಿ ಎಂದು ಮೌಖಿಕವಾಗಿ ತಿಳಿಸಿ, ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.