ಕೆಪಿಎಸ್‌ಸಿ ಅಧ್ಯಕ್ಷರ ಅಮಾನತುಪಡಿಸಿದ ರಾಜ್ಯಪಾಲರ ಕ್ರಮಕ್ಕೆ ಸಂಪುಟದ ಒಪ್ಪಿಗೆಯಿದೆ; ಹೈಕೋರ್ಟ್‌ಗೆ ಎಜಿ ಹೇಳಿಕೆ

Update: 2026-07-25 01:23 IST

​ಬೆಂಗಳೂರು: ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶಕ್ಕೆ ರಾಜ್ಯ ಸಚಿವ ಸಂಪುಟ ಸಂಪೂರ್ಣ ಒಪ್ಪಿಗೆ ನೀಡಿದ್ದು, ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

​ಅಮಾನತು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ರಾಜ್ಯಪಾಲರ ಆದೇಶವನ್ನು ಸಚಿವ ಸಂಪುಟವು ದೃಢೀಕರಿಸಿದೆ. ವಿವೇಚನೆ ಬಳಸಿಯೇ ಸಂಪುಟ ನಿರ್ಧಾರ ಕೈಗೊಂಡಿದೆ. ಸಲಹೆ-ಶಿಫಾರಸು ಕಡ್ಡಾಯವಾಗಿದೆಯಾದರೂ, ಕೆಲ ವಿಶೇಷ ಸಂದರ್ಭಗಳಲ್ಲಿ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದು, ಅದನ್ನು ಸಂಪುಟ ಅನುಮೋದಿಸಿದೆ. ಸಂವಿಧಾನದ ವಿಧಿ 74(1)ರ ಪ್ರಕಾರ ಸಂಪುಟದ ಸಲಹೆ ಸೂಚನೆ ಪ್ರಕಾರ ರಾಜ್ಯಪಾಲರು ನಡೆಯಬೇಕು. 163ನೇ ವಿಧಿಯ ಪ್ರಕಾರ ರಾಜ್ಯಪಾಲರು ವಿವೇಚನೆ ಬಳಕೆ ಮಾಡಬಹುದಾಗಿದೆ. ಹಾಲಿ ಪ್ರಕರಣದಲ್ಲಿ ರಾಜ್ಯಪಾಲರು ಕೈಗೊಂಡಿರುವ ನಿರ್ಧಾರ ಸರಿಯಾಗಿಯೇ ಇದ್ದು, ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಮನವಿ ಮಾಡಿದರು.

ಕೆಪಿಎಸ್‌ಸಿ ಪರ ಹಿರಿಯ ವಕೀಲ ರೊಬೆನ್‌ ಜಾಕಬ್‌ ವಾದ ಮಂಡಿಸಿ, ಕೆಲ ವಿಶೇಷ ಸಂದರ್ಭಗಳಲ್ಲಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹಾಲಿ ಪ್ರಕರಣದಲ್ಲಿ ಸಂಪುಟವು ರಾಜ್ಯಪಾಲರ ನಿರ್ಧಾರವನ್ನು ಅನುಮೋದಿಸಿದೆ. ಇದೊಂದು ವಿಶೇಷ ಪ್ರಕರಣವಾಗಿದ್ದು, ರಾಜ್ಯಪಾಲರು ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು.

ಮುಂದುವರಿದು, ಸಂವಿಧಾನದ 316ನೇ ವಿಧಿಯು ನೇಮಕ ಪ್ರಾಧಿಕಾರದ ಬಗ್ಗೆ ಮಾತನಾಡುತ್ತದೆ. ಸಂಪುಟದ ಶಿಫಾರಸಿನ ಪ್ರಕಾರ ರಾಜ್ಯಪಾಲರು ನೇಮಕ ಮಾಡುತ್ತಾರೆ. ಸಂವಿಧಾನದ 317ನೇ ವಿಧಿಯ ಪ್ರಕಾರ ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಸದಸ್ಯರನ್ನು ರಾಜ್ಯಪಾಲರು ಅಮಾನತುಗೊಳಿಸಬಹುದು. ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌ ತನಿಖೆಯ ನಂತರ ವಜಾಗೊಳಿಸುತ್ತಾರೆ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಪರೀಕ್ಷಾ ನಿಯಂತ್ರಕರು ನೇರವಾಗಿ ಕೆಪಿಎಸ್‌ಸಿ ಅಧ್ಯಕ್ಷರಿಗೆ ವರದಿ ಮಾಡಿಕೊಳ್ಳುತ್ತಾರೆ. ಕಾರ್ಯದರ್ಶಿ, ಸದಸ್ಯರಿಗೆ ಪರೀಕ್ಷಾ ನಿಯಂತ್ರಕರು ವರದಿ ನೀಡುವುದಿಲ್ಲ ಎಂದರು.

ಈ ಹಂತದಲ್ಲಿ ಶಿವಶಂಕರಪ್ಪ ಸಾಹುಕಾರ್‌ ಪುತ್ರಿಯ ನೇಮಕಾತಿ ವಿಚಾರ ಪ್ರಸ್ತಾಪಿಸಲು ಮುಂದಾದ ಕೆಪಿಎಸ್‌ಸಿ ಪರ ವಕೀಲರ ವಾದಕ್ಕೆ ತಡೆ ಹಾಕಿದ ಹೈಕೋರ್ಟ್‌, ಈ ವಿಚಾರ ಇಲ್ಲಿಗೆ ಅನ್ವಯಿಸುವುದಿಲ್ಲ. ಸುಪ್ರೀಂಕೋರ್ಟ್‌ ಅದನ್ನು ಪರಿಶೀಲಿಸಲಿದೆ. ನಾವು ರಾಜ್ಯಪಾಲರು ಚಲಾಯಿಸಿರುವ ಅಧಿಕಾರವನ್ನು ಮಾತ್ರ ಪರಿಶೀಲಿಸುತ್ತೇವೆ ಎಂದು ಹೇಳಿತು.

ರಾಜ್ಯಪಾಲರು, ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿ ಪರ ವಕೀಲರ ವಾದಕ್ಕೆ ಪ್ರತಿಕ್ರಿಯೆ ನೀಡಿದ ಸಾಹುಕಾರ್‌ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌, ಅರ್ಜಿದಾರರನ್ನು ರಾಜ್ಯಪಾಲರು ಸಂಪುಟದ ಸಲಹೆ ಮತ್ತು ಶಿಫಾರಸಿನ ಅನುಸಾರ ಅಮಾನತು ಮಾಡಿಲ್ಲ. ಸಾಹುಕಾರ್‌ ವಿರುದ್ಧ ಯಾವುದೇ ತನಿಖೆ ಬಾಕಿ ಇಲ್ಲ. ಮಾಧ್ಯಮ ವರದಿಗಳನ್ನು ಆಧರಿಸಿ ಅಮಾನತು ಮಾಡಲಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತು/ವಜಾ ಮಾಡುವ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇರುವುದು. ಇಲ್ಲಿ ಯಾವುದೇ ತನಿಖೆಯಾಗಿಲ್ಲ. ಏಕಾಏಕಿ ಸಾಹುಕಾರ್‌ ಅವರನ್ನು ಅಮಾನತು ಮಾಡಲಾಗಿದೆ. ರಾಜ್ಯಪಾಲರು ನಿರ್ಧಾರ ಕೈಗೊಂಡ ಬಳಿಕ ಸಂಪುಟ ಒಪ್ಪಿಗೆ ನೀಡುವುದನ್ನು ಒಪ್ಪಲಾಗದು. ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News