ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಮೆರಿಕದ ಪ್ರಮುಖ ಐಟಿ ಹೊರಗುತ್ತಿಗೆ ಕಂಪನಿಗಳಿಗೆ ಅನ್ವಯಿಸುವ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮವನ್ನು (Permanent Labor Certification Programme) ಅಮೆರಿಕ ಸರ್ಕಾರ ಅಮಾನತುಗೊಳಿಸಿರುವುದು ಭಾರತದ ಮೇಲೆ ಸಂಕೀರ್ಣ ಹಾಗೂ ದೂರಗಾಮಿ ಪರಿಣಾಮಗಳನ್ನು ಬೀರಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಎಚ್-1ಬಿ ವೀಸಾ ಹೊಂದಿರುವವರೂ ಸೇರಿದಂತೆ ವಿದೇಶಿ ಉದ್ಯೋಗಿಗಳು ಉದ್ಯೋಗ ಆಧಾರಿತ ಗ್ರೀನ್‌ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಈ ಪ್ರಮಾಣೀಕರಣವು ನಿರ್ಣಾಯಕ ಹಂತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೆಳವಣಿಗೆಯು ಸಾಂಪ್ರದಾಯಿಕ ಭಾರತೀಯ ಐಟಿ ಹೊರಗುತ್ತಿಗೆ ಮಾದರಿಗೆ ಸ್ಪಷ್ಟ ಸವಾಲಾಗಲಿದೆ. ಅಮೆರಿಕದಲ್ಲಿ ಕಾರ್ಯಾಚರಣೆಯ ವೆಚ್ಚ ಹೆಚ್ಚಾಗಬಹುದು. ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಅಲ್ಲದೆ, ಭಾರತೀಯ ತಂತ್ರಜ್ಞಾನ ವೃತ್ತಿಪರರನ್ನು ಅಮೆರಿಕಕ್ಕೆ ಕಳುಹಿಸಿ ಕೆಲಸ ಮಾಡಿಸುವಲ್ಲಿ ಕಂಪನಿಗಳಿಗಿದ್ದ ನಮ್ಯತೆಯೂ ಕಡಿಮೆಯಾಗಬಹುದು.

ಆದರೆ, ಭಾರತದ ತಂತ್ರಜ್ಞಾನ ಕೇಂದ್ರವಾಗಿ ಬೆಳವಣಿಗೆಯ ದೃಷ್ಟಿಯಿಂದ ಇದರ ಪರಿಣಾಮಗಳು ವಿಭಿನ್ನವಾಗಿರಬಹುದು. ಭಾರತೀಯ ಎಂಜಿನಿಯರ್‌ಗಳನ್ನು ಅಮೆರಿಕಕ್ಕೆ ಕಳುಹಿಸುವುದು ಹೆಚ್ಚು ಕಷ್ಟಕರ ಹಾಗೂ ದುಬಾರಿಯಾದರೆ, ಉನ್ನತ ಮೌಲ್ಯದ ತಂತ್ರಜ್ಞಾನ ಕಾರ್ಯಗಳನ್ನು ಪ್ರತಿಭಾವಂತ ಮಾನವ ಸಂಪನ್ಮೂಲ ಈಗಾಗಲೇ ಲಭ್ಯವಿರುವ ಭಾರತದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸುವ ಸಾಧ್ಯತೆಯಿದೆ.

ಇದರಿಂದ ಭಾರತದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (Global Capability Centres–GCCs) ವಿಸ್ತರಣೆಗೆ ವೇಗ ದೊರೆಯಬಹುದು. ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D), ಎಂಜಿನಿಯರಿಂಗ್ ಹಾಗೂ ಉತ್ಪನ್ನ ಅಭಿವೃದ್ಧಿಗೆ ಸಂಬಂಧಿಸಿದ ಹೆಚ್ಚಿನ ಜವಾಬ್ದಾರಿಗಳು ಭಾರತದ ನಗರಗಳಿಗೆ ವರ್ಗಾವಣೆಯಾಗಬಹುದು. ಹಿರಿಯ ತಂತ್ರಜ್ಞಾನ ಪರಿಣತರಿಗಾಗಿ ದೇಶೀಯ ಬೇಡಿಕೆ ಹೆಚ್ಚುವುದರ ಜೊತೆಗೆ, ಜಾಗತಿಕ ಐಟಿ ಸೇವಾ ಪೂರೈಕೆದಾರ ರಾಷ್ಟ್ರವೆಂಬ ಭಾರತದ ಸ್ಥಾನಮಾನವೂ ಮತ್ತಷ್ಟು ಬಲಗೊಳ್ಳಬಹುದು.

ಹೀಗಾಗಿ, ಭಾರತವು ಕೇವಲ ವಿಶ್ವದ ಐಟಿ ಸೇವೆಗಳನ್ನು ಒದಗಿಸುವ ರಾಷ್ಟ್ರವಾಗಿ ಉಳಿಯದೆ, ಉತ್ಪನ್ನ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ (AI), ಆಳವಾದ ತಂತ್ರಜ್ಞಾನ (Deep Tech) ಹಾಗೂ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಅವಕಾಶವೂ ಇದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor