ಸಾಂದರ್ಭಿಕ ಚಿತ್ರ (Photo credit: Gemini AI)

ಬೆಂಗಳೂರು, ಅ.9: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಗುರುವಾರ ರಾಜ್ಯಾದ್ಯಂತ 45 ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಬೆಂಗಳೂರಿನ ಎರಡು, ಮೈಸೂರು ಮತ್ತು ರಾಯಚೂರಿನ ಒಂದು 45 ಐಸ್ಕ್ರೀಂ ತಯಾರಿಕಾ ಘಟಕದಲ್ಲಿ FSSAI ಕಾಯ್ದೆಯನ್ನು ಉಲಂಘಿಸಿರುವುದು ಕಂಡುಬಂದಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಕಟನೆ ತಿಳಿಸಿದೆ.

ಪರಿಶೀಲನೆಯ ವೇಳೆ ಬೆಂಗಳೂರಿನ ಜಯನಗರ 3ನೇ ಬ್ಲಾಕ್ ನಲ್ಲಿರುವ ಸಾವರ ಐಸ್ಕ್ರೀಂ ಕೆಫೆ, ಬಿಳೇಕಹಳ್ಳಿಯ ಬನ್ನೇರುಘಟ್ಟ ರಸ್ತೆಯ ಎಂ.ಎನ್. ಎಂಟರ್ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್ ಕ್ರೀಂ ತಯಾರಿಕಾ ಘಟಕ ಮತ್ತು ರಾಯಚೂರಿನ ಜೆಮಿನಿ ಐಸ್ ಕ್ರೀಂ ತಯಾರಿಕಾ ಘಟಕಗಳಲ್ಲಿ FSSAI ಕಾಯ್ದೆಯನ್ನು ಉಲಂಘಿಸಿರುವುದು ಕಂಡುಬಂದಿದೆ. ಈ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ 2011 ನಿಯಮಗಳು/ನಿಬಂಧನೆಗಳನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.

70 ಆಹಾರ ಮಾದರಿಗಳ ಸಂಗ್ರಹ

ಈ ವಿಶೇಷ ತಪಾಸಣೆಯ ವೇಳೆ ವಿವಿಧ ಐಸ್ ಕ್ರೀಂ ತಯಾರಿಕಾ ಘಟಕಗಳಿಂದ ಐಸ್ ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು, ಸಕ್ಕರೆ, ವಿವಿಧ ಆಹಾರ ಸೇರ್ಪಡೆ ಪದಾರ್ಥಗಳು ಹಾಗೂ ಇತರ ಕಚ್ಚಾ ವಸ್ತುಗಳನ್ನು ಒಳಗೊಂಡಂತೆ ಒಟ್ಟು 70 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವುದಕ್ಕಾಗಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ

ಪರಿಶೀಲನೆ ವೇಳೆ ಅವಧಿ ಮೀರಿದ ಐಸ್ಕ್ರೀಂ, ಹಾಲು, ಬಿಸ್ಕತ್ ಮತ್ತು ಕೊಬ್ಬರಿ ಪುಡಿ ಪತ್ತೆಯಾಗಿವೆ. ಇದಲ್ಲದೇ ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯ ಪರಿಶೀಲನೆಗಾಗಿ ಈ ದಾಳಿ ನಡೆಸಲಾಗಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಇಂತಹ ವಿಶೇಷ ತಪಾಸಣೆ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor