×
Ad

ಗುತ್ತಿಗೆದಾರರಿಗೆ ಬಿಲ್ ಪಾವತಿಗಾಗಿ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ: ಡಿಸಿಎಂ ಡಿಕೆಶಿ

Update: 2025-04-11 14:37 IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಎ.11: "ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಇದರಲ್ಲಿ ಭಾಗಿಯಾಗಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿಂದು ಬಿಲ್ ಪಾವತಿ ಕಮಿಷನ್ ಕೇಳಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

"ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಅವರಿಗೆ ಇಲಾಖೆಯ ಬಜೆಟ್ ಅರಿವಿಲ್ಲವೇ? ಅನುದಾನವೇ ಇಲ್ಲದಿರುವಾಗ ಅವರು ಗುತ್ತಿಗೆ ಹೇಗೆ ತೆಗೆದುಕೊಂಡರು?" ಎಂದು ಡಿಸಿಎಂ ಪ್ರಶ್ನಿಸಿದರು.

"ಬಿಜೆಪಿ ಅವಧಿಯಲ್ಲಿ ನನ್ನ ಇಲಾಖೆಯೊಂದರಲ್ಲೇ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತದ ಗುತ್ತಿಗೆಯನ್ನು ನೀಡಲಾಗಿದೆ. ಈ ಗುತ್ತಿಗೆ ಬಿಲ್ ಪಾವತಿ ಮಾಡಿಸುವಂತೆ ಶಾಸಕರ ಮೂಲಕ ಮನವಿ ಮಾಡಲಾಗುತ್ತಿದೆ" ಎಂದು ತಿಳಿಸಿದರು.

"ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಒಂದು ವರ್ಷ ಮುಂಚಿತವಾಗಿಯೇ ನಾವು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆವು. ಅನುದಾನ ಇಲ್ಲದೆ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತು ಕೇಳದೆ ಈಗ ರಾಜಕೀಯ ನಾಯಕರ ಮೂಲಕ ಬಿಲ್ ಪಾವತಿಗೆ ಮನವಿ ಪತ್ರ ನೀಡುತ್ತಿದ್ದಾರೆ" ಎಂದು ಹೇಳಿದರು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಚರ್ಚೆ ಬಗ್ಗೆ ಕೇಳಿದಾಗ, "ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿಯಾಗಲಿ, ನಾನಾಗಲಿ ಇನ್ನು ನೋಡಿಲ್ಲ. ಇದನ್ನು ನೋಡಿದ ನಂತರ ಚರ್ಚೆ ಮಾಡಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ಆಗುವುದಿಲ್ಲ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News