×
Ad

ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಪೊಲೀಸರಿಗೆ ತರಬೇತಿ : ಡಿಜಿಪಿ ಅಲೋಕ್ ಮೋಹನ್

Update: 2024-07-01 20:31 IST

ಬೆಂಗಳೂರು : ದೇಶಾದ್ಯಂತ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಸೋಮವಾರ ಈ ಬಗ್ಗೆ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಜು.1ರಿಂದ ಅನುಷ್ಠಾನಕ್ಕೆ ಬಂದಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಕುರಿತು ಇಲಾಖೆಯ ಎಲ್ಲಾ 7 ವಲಯಗಳು, 6 ಕಮೀಷನರೇಟ್ ಘಟಕಗಳು ಹಾಗೂ 1,063 ಪೊಲೀಸ್ ಠಾಣೆಗಳು ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಿ ತಿದ್ದುಪಡಿ ತರಲಾಗಿದ್ದು, ಕಳೆದ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರ ಇದನ್ನು ಅಂಗೀಕರಿಸಿತ್ತು. ಅದರಂತೆ ಜು.1ರಿಂದ ಎಲ್ಲಾ ಹೊಸ ಎಫ್‍ಐಆರ್ ಗಳನ್ನು ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ದಾಖಲಿಸಲಾಗುತ್ತಿದೆ. ಈ ಹಿಂದೆ ದಾಖಲಾಗಿರುವ ಪ್ರಕರಣಗಳು ಅಂತಿಮ ವಿಲೇವಾರಿಯಾಗುವವರೆಗೆ ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೊಸ ಕಾಯ್ದೆಯಡಿ ಬೆಂಗಳೂರಲ್ಲಿ 2 ಪ್ರಕರಣ ದಾಖಲು: ದೇಶಾದ್ಯಂತ ಹೊಸ ಅಪರಾಧ ಕಾಯ್ದೆ ಜಾರಿಯಾಗುತ್ತಿದ್ದಂತೆ ಈವರೆಗೆ ಹೊಸ ಕಾಯ್ದೆಯಡಿ ಬೆಂಗಳೂರಿನ ಆಡುಗೋಡಿ ಮತ್ತು ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಯುಡಿಆರ್ ಪ್ರಕರಣಗಳು ದಾಖಲಾಗಿವೆ. ಎರಡು ಠಾಣೆಗಳಲ್ಲಿ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(ಬಿಎನ್‍ಎಸ್‍ಎಸ್) 194ನೇ ಕಾಯ್ದೆ ಪ್ರಕಾರ ಪ್ರಕರಣಗಳು ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News