ಹತ್ತು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಜಂಟಿ ಸರ್ವೆ ಶೀಘ್ರದಲ್ಲೇ ಪೂರ್ಣ : ಸಚಿವ ರಾಮಲಿಂಗಾರೆಡ್ಡಿ

Update: 2026-08-20 18:18 IST

ರಾಮಲಿಂಗಾರೆಡ್ಡಿ

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿನ ಮೀಸಲು ಅರಣ್ಯದಿಂದ ಹೊರತುಪಡಿಸಲಾದ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸರಿಯಾದ ಗಡಿ ಗುರುತಿಸುವ ಜಂಟಿ ಸರ್ವೆ ಕಾರ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳತ ಪಕ್ಷದ ಸದಸ್ಯರ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಕಿ ಇರುವ ಜಂಟಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲು ಜಂಟಿ ಮೋಜಣಿ ತಂಡಗಳು, ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಹಾಗೂ ಟಾಸ್ಕ್ ಫೋರ್ಸ್‍ನ ಅವಧಿಯನ್ನು ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಜಿಲ್ಲೆಯ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಎನ್.ಆರ್ ಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕುಗಳ ಅಧಿಸೂಚಿತ 55,989 ಹೆಕ್ಟೇರ್ ಅರಣ್ಯ ಮೀಸಲು ಪ್ರದೇಶದಿಂದ ಹೊರತುಪಡಿಸಲಾದ 10 ಸಾವಿರ ಹೆಕ್ಟೇರ್ ಜಮೀನುಗಳ ಕುರಿತಂತೆ ಜಿಲ್ಲಾಧಿಕಾರಿಗಳು ಜು.30ರಂದು ಪ್ರಗತಿ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕೊಪ್ಪ ಹಾಗೂ ಚಿಕ್ಕಮಗಳೂರು ಅರಣ್ಯ ವಿಭಾಗಗಳ ವ್ಯಾಪ್ತಿಯ 185ಗ್ರಾಮಗಳ 1,527 ಸರ್ವೆ ನಂಬರ್ ಗಳ ಪೈಕಿ 97 ಗ್ರಾಮಗಳ 797 ಸರ್ವೆ ನಂಬರ್ ಗಳ ಜಂಟಿ ಮೋಜಣಿ ಕಾರ್ಯ ಪೂರ್ಣಗೊಂಡಿದೆ. 86 ಗ್ರಾಮಗಳ 730 ಸರ್ವೆ ನಂಬರ್ ಗಳಿಗೆ ಸಂಬಂಧಿಸಿದ 30,764 ಹೆಕ್ಟೇರ್ ಪ್ರದೇಶದ ಜಂಟಿ ಮೋಜಣಿ ಬಾಕಿ ಇದೆ. ಇದುವರೆಗೆ ಶೇ.45ರಷ್ಟು ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News