×
Ad

ಅಭಿವೃದ್ಧಿಯ ದೃಷ್ಟಿಯಿಂದ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಅಗತ್ಯ : ನ್ಯಾ.ನಾಗಮೋಹನದಾಸ್

Update: 2026-07-14 21:59 IST

ಬೆಂಗಳೂರು  : ಆಡಳಿತ ಉತ್ತಮಗೊಳಿಸಲು ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಸೌಹಾರ್ದ ಸಭಾಂಗಣದಲ್ಲಿ ಮಹಿಳಾ ಮೀಸಲಾತಿಗಾಗಿ ರಾಷ್ಟ್ರೀಯ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಯಾವುದೇ ಷರತ್ತುಗಳಿಲ್ಲದೇ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗಾಗಿ ಆಗ್ರಹ ಸಭೆ’ಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿದೆ. ಆದರೆ ಸ್ಥಳೀಯ ಸಂಸ್ಥೆಗಳು ಕಾನೂನುಗಳನ್ನು ರಚನೆ ಮಾಡುವ ಸಂಸ್ಥೆಗಳು ಅಲ್ಲ. ಸ್ಥಳೀಯ ಸಂಸ್ಥೆಗಳು ಸಂಸತ್ತು ಹಾಗೂ ವಿಧಾನ ಮಂಡಲಗಳು ಮಾಡಿರುವ ಕಾನೂನುಗಳನ್ನು ಜಾರಿ ಮಾಡುವ ಸಂಸ್ಥೆಗಳು ಮಾತ್ರ. ಶಾಸನ ಸಭೆಗಳಲ್ಲಿಯೂ ಮಹಿಳಾ ಮೀಸಲಾತಿ ಬೇಕು ಎನ್ನುವುದು 35 ವರ್ಷಗಳ ಹೋರಾಟವಾಗಿದೆ. ಆದರೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳ್ಳುತ್ತಿಲ್ಲ ಎಂದು ತಿಳಿಸಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಜೊತೆ ಅಧಿಕಾರವನ್ನು ಹಂಚಿಕೊಳ್ಳುವ, ರಾಜಕೀಯವಾಗಿ ಸಬಲರನ್ನಾಗಿ ಮಾಡಲು ಬೇಕಾದ ಇಚ್ಛಾಶಕ್ತಿಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಮಹಿಳಾ ಮೀಸಲಾತಿ ಜಾರಿ ವಿಷಯದಲ್ಲಿ ಒಂದಲ್ಲ ಒಂದು ಕಾರಣ ಹೇಳಿ ಮುಂದೂಡಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರಗಳ ಮರುವಿಂಗಡನೆ, ಒಬಿಸಿ ಮಹಿಳೆಯರಿಗೆ ಮೀಸಲಾತಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿಯ ಜೊತೆಗೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಲಿಂಕ್ ಮಾಡಬಾರದು. ಈಗ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿ, ಮುಂದೆ ಬೇರೆ ವಿಷಯಗಳನ್ನು ಚರ್ಚೆ ಮಾಡಿ ಎಂದು ತಿಳಿಸಿದರು.

ಇಡೀ ಜಗತ್ತಿನಲ್ಲಿ ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲಿಲ್ಲ. ಈ ಚಾರಿತ್ರಿಕ ತಪ್ಪನ್ನು ಸರಿಪಡಿಸಲು ಮಹಿಳಾ ಮೀಸಲಾತಿ ಬೇಕು. ಸ್ವಾತಂತ್ರ್ಯ ಬಂದು 76 ವರ್ಷವಾಗಿದೆ.18 ಲೋಕಸಭೆ ಚುನಾವಣೆ ನಡೆದಿವೆ. ಇದುವರೆಗೆ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.14.50ರಷ್ಟು ದಾಟಿಲ್ಲ. ರಾಜ್ಯಮಟ್ಟದಲ್ಲಿ ಶೇ.10ರಷ್ಟು ಮಹಿಳಾ ಪ್ರಾತಿನಿಧ್ಯ ದಾಟಲಿಲ್ಲ ಎಂದು ತಿಳಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಅಥವಾ ಪ್ರಾತಿನಿಧ್ಯ ಬೇಕು ಎನ್ನುವ ಕಾರಣಕ್ಕಾಗಿ ಮಹಿಳೆಯರಿಗೆ ಮೀಸಲಾತಿ ಬೇಕಾಗಿಲ್ಲ. ಆ ರೀತಿ ಮೀಸಲಾತಿ ಕೊಡುವುದರಿಂದ ದೇಶದ ಎಲ್ಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ಆದರೆ ಆ ಧಿಕ್ಕಿನಲ್ಲಿ ಸರಕಾರಗಳು ಯೋಚನೆ ಮಾಡಲು ಪ್ರಾರಂಭಿಸುತ್ತವೆ. ಕಾರ್ಯೋನ್ಮುಖವಾಗಲೂ ಪ್ರಾರಂಭಿಸುತ್ತವೆ. ಮುಖ್ಯವಾಗಿ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಕನಿಷ್ಠ ಅಗತ್ಯಗಳಿಗೆ ಆದ್ಯತೆ ನೀಡುವ ಮನಸ್ಥಿತಿ ಇರುವುದು ಮಹಿಳೆಯರಿಗೆ ಎಂದು ತಿಳಿಸಿದರು.

ಯಾವುದೇ ದೇಶ ಶೇ.50ರಷ್ಟು ಮಹಿಳೆಯರನ್ನು ದೂರವಿಟ್ಟು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಿರುವ ದೇಶಗಳನ್ನು ನೋಡಿದರೆ, ಅಲ್ಲಿ ಪುರುಷರಿಗೆ ಸಮವಾಗಿ ಅಥವಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಿರುವ ಕಾರಣ ಆ ದೇಶಗಳು ಅಭಿವೃದ್ಧಿ ಸಾಧಿಸಿವೆ ಎಂದು ತಿಳಿಸಿದರು.

ಸಭೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಚಂದ್ರಕುಮಾರಿ, ಪ್ರದಾನ ಕಾರ್ಯದರ್ಶಿ ದೇವಿ, ಹೋರಾಟಗಾರ್ತಿ ಕೆ.ಎಸ್.ವಿಮಲಾ, ಆಶಾ ರಮೇಶ್, ಪ್ರಭಾ ಎನ್ ಮತ್ತಿತರರು ಹಾಜರಿದ್ದರು.

(ಮಾಳಿಂಗರಾಯ)

............................

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News