ಬೆಂಗಳೂರು : ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನದ ರಕ್ಷಣೆಯಲ್ಲಿ ಮುಸ್ಲಿಮರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕ ಮುಸ್ಲಿಮ್ ನಾಯಕರು, ವಿದ್ವಾಂಸರು ಹಾಗೂ ಜನಸಾಮಾನ್ಯರು ತ್ಯಾಗ ಮತ್ತು ಬಲಿದಾನಗಳನ್ನು ಮಾಡಿದ್ದಾರೆ. ದೇಶದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅವರು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ವಿ.ಗೋಪಾಲಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ಎಲ್ಲ ಧರ್ಮಗಳ ಜನರಿಗೆ ತಮ್ಮ ಧರ್ಮವನ್ನು ಅನುಸರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧಾರ್ಮಿಕ ನಂಬಿಕೆಗಳೊಂದಿಗೆ ಗೌರವಯುತವಾಗಿ ಬದುಕುವ ಹಕ್ಕಿದೆ. ಈ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಸ್ಲಿಮರು ಆರಂಭದಿಂದಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವಲ್ಲಿ ಅವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಹೋದರತ್ವವನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಗೋಪಾಲಗೌಡ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಡಾ.ಮಕ್ಸೂದ್ ಇಮ್ರಾನ್ ರಶಾದಿ, ರಾಜ್ಯ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಝಬೀಉಲ್ಲಾ, ಅಡ್ವೊಕೇಟ್ ಸಮದ್, ಫೈರೋಝ್ ಅಬ್ದುಲ್ಲಾ, ಜಾಮಿಯಾ ಮಸ್ಜಿದ್ ಮುಸ್ಲಿಮ್ ಚಾರಿಟೆಬಲ್ ಫಂಡ್ ಟ್ರಸ್ಟ್ ಅಧ್ಯಕ್ಷ ಯೂನುಸ್ ಮುಹಮ್ಮದ್, ಕಾರ್ಯದರ್ಶಿ ನೂರುಲ್ ಅಮೀನ್ ಅನ್ವರ್, ಜಂಟಿ ಕಾರ್ಯದರ್ಶಿ ಸೈಯದ್ ಅಬ್ದುಲ್ ಗಫೂರ್, ಖಜಾಂಚಿ ಅತ್ತಾರ್ ಮುರ್ತಝಾ ಹುಸೇನ್ ಘುಫ್ರಾನ್, ಸಲಾಮ್ ಸೆಂಟರ್ ಅಧ್ಯಕ್ಷ ಸೈಯದ್ ಹಾಮಿದ್ ಮೊಹ್ಸಿನ್, ಇನ್ನಿತರ ಟ್ರಸ್ಟಿಗಳು ಉಪಸ್ಥಿರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor