​ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ಇರುವ "ಶ್ರೀ ನಂದಿ ಬಸವೇಶ್ವರ ಮಹಿಳಾ ಸಂಘ" ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪ್ರಕ್ರಿಯೆಗೆ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಕೆ. ಗೋಪಾಲಯ್ಯ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ಸರ್ವರ್ ಸಮಸ್ಯೆಯಿಂದಾಗುವ ವಿಳಂಬ ತಪ್ಪಿಸಲು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಇ-ಕೆವೈಸಿ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

​ಕಡ್ಡಾಯ ಇ-ಕೆವೈಸಿ: ರೇಷನ್ ಕಾರ್ಡ್‌ನಲ್ಲಿ ಹೆಸರಿರುವ 5 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಚಿತ ಅಕ್ಕಿ/ಸೌಲಭ್ಯ ರದ್ದಾಗುವ ಸಾಧ್ಯತೆಯಿದೆ.

​ವಿಶೇಷ ಸಮಯದ ಸೌಲಭ್ಯ: ದಿನಗೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ 6.00 ರಿಂದ ರಾತ್ರಿ 8.00 ರವರೆಗೆ ಸಮಯ ನಿಗದಿಪಡಿಸಲಾಗಿದೆ.

​ತ್ವರಿತ ಸೇವೆ: ಸಾರ್ವಜನಿಕರು ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳುವುದನ್ನು ತಪ್ಪಿಸಲು ಸ್ಥಳದಲ್ಲಿಯೇ ಹೆಚ್ಚುವರಿ ಲ್ಯಾಪ್‌ಟಾಪ್ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯಗತಗೊಳಿಸಲಾಗಿದೆ.

​15-20 ದಿನಗಳ ಪ್ರಕ್ರಿಯೆ: ಕಮಲಾನಗರ ವ್ಯಾಪ್ತಿಯ ಸುಮಾರು 9 ನ್ಯಾಯಬೆಲೆ ಅಂಗಡಿಗಳ ಶೇ.100 ರಷ್ಟು ಇ-ಕೆವೈಸಿ ಪ್ರಕ್ರಿಯೆಯನ್ನು ಮುಂದಿನ 15 ರಿಂದ 20 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

​ಜನರು ಈ ಅವಕಾಶವನ್ನು ಬಳಸಿಕೊಂಡು, ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಕರೆತಂದು ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿಡಿ ಶ್ರೀನಿವಾಸ್ ಹಾಗೂ 9 ನ್ಯಾಯಬೆಲೆ ಅಂಗಡಿಯವರು ಪಾಲ್ಗೊಂಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor