ಸುಪ್ರೀಂ ಕೋರ್ಟ್‌ | Photo Credit : PTI 

ಬೆಂಗಳೂರು : ಕೆಪಿಎಸ್‌ಸಿ ನೇಮಕಾತಿ ಅಕ್ರಮ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ನೇಮಕ ಮಾಡಿದ್ದ ರಾಜ್ಯ ಹೈಕೋರ್ಟ್ ಅದೇಶಕ್ಕೆ ಇಂದು ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನ ಅಕ್ಟೋಬರ್ 12 ನಿಗದಿ ಪಡಿಸಿದೆ.

KPSC ಅಕ್ರಮ ನೇಮಕಾತಿ ಸಂಬಂಧ ಎಸ್ ಐ ಟಿ ರಚನೆ ಮಾಡಿದ್ದನ್ನು ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಇಂದು ಅದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನಡೆಸಿತು. ರಾಜ್ಯ ಸರಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಾಡಿದರು.

ವಾದದ ವೇಳೆ ಕಪಿಲ್ ಸಿಬಲ್ ಈಗಾಗಲೇ ಪ್ರಕರಣವನ್ನು  ಸಿಐಡಿ ನಿಷ್ಪಕ್ಷಪಾತವಾಗಿ ಮಾಡುತ್ತಿದೆ. ಹೀಗಿರುವಾಗ ಎಸ್ ಐಟಿ ಮಾಡುವ ಅವಶ್ಯಕತೆ ಇರಲಿಲ್ಲವೆಂದರು ಅಲ್ಲದೆ. ಎಸ್‌ಐ ಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಅಲೋಕ್ ಕುಮಾರ್ ಮೇಲೆ ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಿತ್ತು ಎಂದು ಸಂಬಂಧಿಸಿದ ದಾಖಲೆಗಳನ್ನ ಪೀಠಕ್ಕೆ ನೀಡಿದರು.

ಇದಕ್ಕೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, ಹೈಕೋರ್ಟ್ ಪ್ರಕರಣದ ಸೂಕ್ಷ್ಮತೆಯನ್ನ ಅರಿತು ದಕ್ಷ ಅಧಿಕಾರಿಗಳ ಎಸ್ ಐ ಟಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ತನಗೆ ಬೇಕಾದ ಅಧಿಕಾರಗಳನ್ನ ನೇಮಕ ಮಾಡಿಕೊಳ್ಳಲು ಯತ್ನಿಸುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.

ಎರಡು ಕಡೆಯ ವಾದವನ್ನು ಆಲಿಸಿದ ಪೀಠ, ಅಧಿಕಾರಿಯ ಬಗ್ಗೆ ಅಕ್ಷೇಪವಿದ್ದರೆ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಿತ್ತು ಎಂದು ಮೌಖಿಕವಾಗಿ ಹೇಳಿದರು. ಎಸ್ ಐ ಟಿ ರಚನೆಗೆ ಮಧ್ಯಂತರ ತಡೆ ನೀಡಿ ಅಧಿಕಾರಿಯ ವಿರುದ್ದದ ಅಕ್ಷೇಪವನ್ನ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಹೇಳಿ ವಿಚಾರಣೆಯನ್ನ ಅಕ್ಟೋಬರ್ 12 ಕ್ಕೆ ಮುಂದೂಡಿತು.

ಸದ್ಯ ಹೈಕೋರ್ಟ್ ಎಸ್ ಐ ಟಿ ರಚನೆ ಮಾಡಿದ್ದರಿಂದ ಕಳೆದ ಹತ್ತು ದಿನಗಳಿಂದ ಸಿಐಡಿ ತನಿಖೆಯನ್ನ ಸ್ಥಗಿತಗೊಳಿಸಿತ್ತು. ಆದರೆ ಈ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ಸಿಐಡಿ ಮತ್ತೆ ತನಿಖೆ ಮುಂದುವರೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor