ಆ.29ಕ್ಕೆ ‘ನಮ್ಮೂರ ಹೆಮ್ಮೆ’ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ : ಕೃಷ್ಣ ಬೈರೇಗೌಡ
ಬೆಂಗಳೂರು : ಪ್ರತಿಭಾವಂತ ಯುವಕರು ನಮ್ಮೂರ ಹೆಮ್ಮೆ, ನಮ್ಮ ಸಮಾಜದ ಆಸ್ತಿ. ಹೀಗಾಗಿ ಜಿಬಿಎ ಮತ್ತು ಬೆಂಗಳೂರು ಜಿಲ್ಲಾ ಪಂಚಾಯತ್ ವತಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಸ್ಟ್ 29ರಂದು ‘ನಮ್ಮೂರ ಹೆಮ್ಮೆ ಪೌರ ಸನ್ಮಾನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಎಸೆಸೆಲ್ಸಿಯಲ್ಲಿ 621 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು, ಪಿಯುಸಿಯಲ್ಲಿ 596 ಅಥವಾ ಹೆಚ್ಚು ಅಂಕಗಳು ಮತ್ತು ಸೆಂಟ್ರಲ್ ಸಿಲಬಸ್‍ನ 10 ಮತ್ತು 12ನೇ ತರಗತಿಯಲ್ಲಿ 496 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರುವಂತಹ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಿದ್ದೇವೆ ಎಂದಿದ್ದಾರೆ.
ವಿದ್ಯಾರ್ಥಿಗಳು ‘ನಮ್ಮೂರ ಹೆಮ್ಮೆ ಪೌರ ಸನ್ಮಾನ’ ಗೌರವಕ್ಕಾಗಿ ಆಗಸ್ಟ್ 25ರೊಳಗಡೆ ದಯವಿಟ್ಟು ಅರ್ಜಿ ಸಲ್ಲಿಸಬೇಕು. ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ನಮಗೆ ಸಂತೋಷದ ವಿಷಯ. ವಿದ್ಯಾರ್ಥಿಗಳ ಪರಿಶ್ರಮವನ್ನು ಗುರುತಿಸಿ ಅವರಿಗೆ ಗೌರವ ನೀಡುವುದರ ಜೊತೆಗೆ ಸಮಾಜದ ಇತರ ಯುವಕರಿಗೂ ಕೂಡ ಒಂದು ಸ್ಫೂರ್ತಿ ನೀಡುವಂತದ್ದು ಈ ಕಾರ್ಯಕ್ರಮದ ಉದ್ದೇಶ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ಅವರ ಕುಟುಂಬದವರನ್ನು ನಾವು ಆಹ್ವಾನಿಸುತ್ತಿದ್ದೇವೆ. ಬನ್ನಿ ಪ್ರತಿಭೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸೋಣ ಎಂದು ಕೃಷ್ಣ ಬೈರೇಗೌಡ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.