ಬೆಂಗಳೂರಿನಲ್ಲಿ ಶಿವಮೊಗ್ಗದ ಯುವತಿ ಆತ್ಮಹತ್ಯೆ
ಬೆಂಗಳೂರು : ಕಾಲೇಜಿನ ಸಹಪಾಠಿ ಕಿರುಕುಳದಿಂದ ಮನನೊಂದು ಶಿವಮೊಗ್ಗದ ಯುವತಿಯು ಅಗ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ರವಿವಾರದಂದು ನಡೆದಿದೆ. ಮೃತರನ್ನು ಸಾಗರ ತಾಲೂಕಿನ ಬೆಳಲಮಕ್ಕಿ ಮೂಲದ ವಾಣಿಶ್ರೀ ಎಂದು ಗುರುತಿಸಲಾಗಿದೆ.
ವಾಣಿಶ್ರೀ ಎಚ್‍ಎಸ್‍ಆರ್ ಲೇಔಟ್‍ನಲ್ಲಿನ ವಸತಿಗೃಹದಲ್ಲಿ ವಾಸವಾಗಿದ್ದ ಹತ್ತಿರದ ಆಭರಣ ಅಂಗಡಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.
ಆಕೆ ಈ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ ಅಭಿಷೇಕ್ ಎಂಬಾತನ ಪರಿಚಯವಾಗಿತ್ತು. ಇಬ್ಬರೂ ಪ್ರೀತಿ ಮಾಡುತ್ತಿದ್ದರು. ನಂತರ ಆತನಿಂದ ದೂರವಾಗಿದ್ದ ವಾಣಿಶ್ರೀ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಆ ನಂತರವೂ ಆತ ಶಿವಮೊಗ್ಗದಿಂದಲೇ ಆಗಾಗ್ಗೆ ಕರೆ ಮಾಡಿ ಯುವತಿಗೆ ಕಿರುಕುಳ ಕೊಡುತ್ತಿದ್ದನು. ಈ ಬಗ್ಗೆ ವಾಣಿಶ್ರೀ ಡೆತ್‍ನೋಟ್‍ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಯುವಕನ ಬ್ಲ್ಯಾಕ್‍ಮೇಲ್ ಹಾಗೂ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿಗೆ ಅಭಿಷೇಕ್ ಕಾರಣ ಎಂದು ಮೃತಳ ಅಕ್ಕ ಪೂಜಾ ದೂರು ಕೊಟ್ಟಿದ್ದಾರೆ. ಅಭಿಷೇಕ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಯುವತಿಯ ಮೊಬೈಲ್ ಮತ್ತು ಮರಣ ಪತ್ರ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಯುವಕನ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.