ಕೃಪಾ ಆಳ್ವಾ ಮೊಬೈಲ್, ಧ್ವನಿ ಮಾದರಿ ಎಫ್ಎಸ್ಎಲ್ನಲ್ಲಿ ಪರಿಶೀಲನೆ
ಕೃಪಾ ಆಳ್ವಾ
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು, ಕಾಂಗ್ರೆಸ್‍ನಿಂದ ಉಚ್ಛಾಟಿತಗೊಂಡಿರುವ ಕೃಪಾ ಆಳ್ವಾ ಅವರ ಮೊಬೈಲ್ ಹಾಗೂ ಧ್ವನಿ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ.
ಸ್ಟಿಂಗ್ ವಿಡಿಯೋ ರೆಕಾರ್ಡ್ ಆಗಿದ್ದ ವೇಳೆ ಕೃಪಾ ಆಳ್ವಾ ಅವರ ಮೊಬೈಲ್ ಬಳಕೆಯಾಗಿತ್ತು ಎಂಬ ಹಿನ್ನಲೆಯಲ್ಲಿ ಮೊಬೈಲ್‍ನಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಆಳ್ವಾ ಅವರು ವಿಚಾರಣೆ ಹಾಜರಾದ ಸಂದರ್ಭದಲ್ಲಿ ಮೊಬೈಲ್ ಹಸ್ತಾಂತರಿಸಲು ನಿರಾಕರಿಸಿದ್ದರು. ಆದರೆ ಪೊಲೀಸರು ಮೊಬೈಲ್ ನೀಡಲೇಬೇಕೆಂದು ಎಚ್ಚರಿಕೆ ನೀಡಿದ ನಂತರ ಅವರು ಮೊಬೈಲ್ ಹಸ್ತಾಂತರಿಸಿದ್ದಾರೆ.
ಕೃಪಾ ಆಳ್ವಾ ಅವರ ಮೊಬೈಲ್ ಧ್ವನಿ ಮಾದರಿಯನ್ನೂ ಪೊಲೀಸರು ಪಡೆದಿದ್ದು, ವಿಡಿಯೋದಲ್ಲಿದ್ದ ಕೃಪಾ ಧ್ವನಿಗೆ ಅದನ್ನು ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಆ ಕಾರಣಕ್ಕೆ ಧ್ವನಿ ಮಾದರಿಯನ್ನೂ ಎಫ್‍ಎಸ್‍ಎಲ್‍ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.