ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ 'ಗ್ಯಾರಂಟಿ' ಈಡೇರಿಸಿ : ರಾಜ್ಯ ಸರಕಾರಕ್ಕೆ ಕೆ.ಎಸ್.ಶೇಖ್ ಕರ್ನಿರೆ ಆಗ್ರಹ
ಕೆ.ಎಸ್.ಶೇಖ್.ಕರ್ನಿರೆ
ಬೆಂಗಳೂರು : ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವ ಘೋಷಣೆ ಮಾಡಿರುವ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಸೌದಿ ಅರೇಬಿಯಾದ ಪ್ರತಿಷ್ಠಿತ ಎಕ್ಸ್ ಪರ್ಟೈಸ್ ಕಂಪೆನಿಯ ಸಿಒಒ ಕೆ.ಎಸ್.ಶೇಖ್.ಕರ್ನಿರೆ ಅವರು, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಖಾತೆ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿಯ ಆವರ್ತನ ನಿಧಿಗಳ ಸ್ಥಾಪನೆ ಕೂಡಲೇ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ 2023ರ ಚುನಾವಣಾ ಪ್ರಣಾಳಿಕೆಯಲ್ಲೇ ಅನಿವಾಸಿಗಳಿಗೆ ಈ ಭರವಸೆ ನೀಡಿದೆ. ಅನಿವಾಸಿಗಳು ಒಂದೂವರೆ ದಶಕದಿಂದ ಇದಕ್ಕಾಗಿ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ರಾಜ್ಯ ಸರಕಾರ ಕೂಡ ಶೀಘ್ರವೇ ಈ ಆಗ್ರಹವನ್ನು ಈಡೇರಿಸುವ ಭರವಸೆ ನೀಡಿತ್ತು. ಹಾಗಾಗಿ ಇನ್ನು ತಡಮಾಡದೇ ಆ ಎರಡೂ ಭರವಸೆಗಳನ್ನು ನೂತನ ಮುಖ್ಯಮಂತ್ರಿಯವರು ಈಡೇರಿಸಬೇಕು ಎಂದು ಎಕ್ಸ್ ಪರ್ಟೈಸ್ ಕಂಪೆನಿಯ ಶೇಖ್ ಕರ್ನಿರೆ ಅವರು ಆಗ್ರಹಿಸಿದ್ದಾರೆ.
ನೂತನ ಅನಿವಾಸಿ ಸೆಕ್ರೆಟರಿಯೇಟ್ ಸ್ಥಾಪನೆ ಘೋಷಣೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಅದರ ಜೊತೆಗೇ ಪ್ರತ್ಯೇಕ ಸಚಿವರು ಇರುವ ಅನಿವಾಸಿ ಖಾತೆ ಹಾಗೂ ಸಾವಿರ ಕೋಟಿ ನಿಧಿಯನ್ನೂ ಕೂಡಲೇ ಸ್ಥಾಪಿಸಬೇಕು. ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಹತ್ತಾರು ರೀತಿಗಳಲ್ಲಿ ಸಹಕರಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅವರು ಕೊಡುಗೆ ನೀಡುತ್ತಿದ್ದಾರೆ. ಅವರ ಶ್ರಮ ಹಾಗೂ ಹೂಡಿಕೆಗಳಿಂದ ಇಲ್ಲಿನ ಆರ್ಥಿಕತೆಗೆ ಇನ್ನಷ್ಟು ಬಲ ಸಿಕ್ಕಿದೆ. ಈಗ ರಾಜ್ಯ ಸರಕಾರ ಅವರ ಆಗ್ರಹವನ್ನು ಈಡೇರಿಸಿ ಬೆಂಬಲಿಸಬೇಕು. ಪ್ರತ್ಯೇಕ ಖಾತೆ ಹಾಗೂ ಸಚಿವರು ಇದ್ದರೆ ಅನಿವಾಸಿ ಕಾರ್ಮಿಕರು ಹಾಗು ಉದ್ಯೋಗಿಗಳ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ. ಅದೇ ರೀತಿ ಅನಿವಾಸಿ ಉದ್ಯಮಿಗಳಿಂದ ರಾಜ್ಯಕ್ಕೆ ಬರುವ ಹೂಡಿಕೆಯಲ್ಲಿ ಹೆಚ್ಚಳವಾಗಲಿದೆ ಎಂದು ಶೇಖ್ ಕರ್ನಿರೆ ಹೇಳಿದ್ದಾರೆ.
ಕೇರಳ, ಪಂಜಾಬ್ ಮಾದರಿಯಲ್ಲಿ ಅನಿವಾಸಿಗಳಿಗಾಗಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವರು ಇರಬೇಕು, ಇದರಿಂದ ಅನಿವಾಸಿಗಳಿಗೂ ಲಾಭ, ರಾಜ್ಯಕ್ಕೂ ಲಾಭವಾಗಲಿದೆ. 30 ಲಕ್ಷದಷ್ಟು ಅನಿವಾಸಿ ಕನ್ನಡಿಗರನ್ನು ರಾಜ್ಯ ಸರಕಾರ ಸದುಪಯೋಗ ಮಾಡಿಕೊಳ್ಳಬೇಕು. ಹಾಗಾಗಿ ನೂತನ ಮುಖ್ಯಮಂತ್ರಿಗಳು ಇದನ್ನು ಅವರ ಸರಕಾರದ ಆರನೇ ಗ್ಯಾರಂಟಿಯಾಗಿ ಕೂಡಲೇ ಜಾರಿ ಮಾಡಬೇಕು ಎಂದು ಶೇಖ್ ಕರ್ನಿರೆ ಅವರು ಆಗ್ರಹಿಸಿದ್ದಾರೆ.