ಪ್ರಜಾಪ್ರಭುತ್ವವಾದಿ ಸಮಾಜವಾದ ಅಗತ್ಯ : ರಮೇಶ್ ಕುಮಾರ್
ಬೆಂಗಳೂರು : ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೇ ಹೋದಾಗ ಮತ್ತು ವ್ಯಾಪಾರವೇ ಸಿದ್ಧಾಂತವಾದಾಗ ಉಳುವುದೆಲ್ಲವೂ ಬರೀ ಕಥೆಗಳಷ್ಟೇ. ಈ ದೇಶದ ಪರಿಸರಕ್ಕೆ ಹೊಂದುವಂತಹ ‘ಪ್ರಜಾಪ್ರಭುತ್ವವಾದಿ ಸಮಾಜವಾದ’ ಇಂದಿನ ಅಗತ್ಯವಾಗಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮಗಳವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ‘ಕನ್ನಡ ಜನಶಕ್ತಿ ಕೇಂದ್ರ’ ಹಾಗೂ ‘ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ’ದ ವತಿಯಿಂದ ಆಯೋಜಿಸಿದ್ದ ‘ಶಾಂತವೇರಿ ಗೋಪಾಲಗೌಡ ಸಂಸ್ಮರಣೆ ಮತ್ತು ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಅಥವಾ ಸಮಾಜವಾದ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಸ್ತುತ ದಿನಗಳಲ್ಲಿ ಡಿಕ್ಟೇಟೋರಿಯಲ್ ಡೆಮಾಕ್ರಸಿ (ಸರ್ವಾಧಿಕಾರಿ ಪ್ರಜಾಪ್ರಭುತ್ವ) ಎಂಬ ಹೊಸ ಪರಿಭಾಷೆ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಈಗ ಎಂತೆಂತಹವರೋ ವಿಧಾನಸಭೆಗೆ ಬರುತ್ತಿದ್ದಾರೆ. ಇನ್ನು ಮುಂದೆ ಪ್ರಜಾಪ್ರಭುತ್ವ ಎಂಬ ಮಾತು ಉಳಿಯುವುದಿಲ್ಲ. ನಾನು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಖರ್ಚು ಮಾಡಿರುವುದು ಕೇವಲ 60ಸಾವಿರ ರೂ., ಈಗ ಚುನಾವಣೆ ಮುಗಿದ ಮೇಲೆ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡುವಾಗ ನಾವು ಯಾರೂ ಸತ್ಯ ಬರೆಯುವುದಿಲ್ಲ. ದುಬಾರಿ ರಾಜಕಾರಣದಲ್ಲಿ ಮುಂದೆ ನಾವು ಉಳಿಯುವುದಿಲ್ಲ ಎಂದು ಹೇಳಿದರು.
ಡಿ.ದೇವರಾಜ ಅರಸು ಮತ್ತು ಶಾಂತವೇರಿ ಗೋಪಾಲಗೌಡ ಕನಸಾದ ಗೇಣಿದಾರರಿಗೆ ಜಮೀನು ನೀಡುವ ಭೂಸುಧಾರಣೆ ಕಾಯ್ದೆಯನ್ನು ಡಿ.ದೇವರಾಜ ಅರಸು ಅವರು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಹಿಂದಿನ ಬಿಜೆಪಿ ಸರಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಮೂಲೆ ಗುಂಪು ಮಾಡಿತು. ನಮ್ಮ ಸರಕಾರ ಹಳೆಯ ಭೂಸುಧಾರಣೆ ಕಾಯ್ದೆಯನ್ನು ಮತ್ತೆ ಜಾರಿಗೆ ತರಬೇಕು ಎಂಬ ತೀರ್ಮಾನ ಕೂಡ ಆಗಿತ್ತು. ಆದರೆ ಬಜೆಟ್ ಭಾಷಣದಲ್ಲಿ ಭೂಸುಧಾರಣೆ ಎಂಬ ಶಬ್ಧವೇ ಮಾಯವಾಗಿತ್ತು. ಇದು ಕನ್ನಡ ನಾಡಿನ ಜನರಿಗೆ ಮಾಡಿದ ದೊಡ್ಡ ದ್ರೋಹ ಎಂದು ಹೇಳಿದರು.
ಕರ್ನಾಟಕದಲ್ಲಿ 30 ದಿನಗಳ ಕಾಲ ಅಧಿವೇಶನ ನಡೆಯುತ್ತದೆ. ಕನಿಷ್ಟ 100 ದಿನವಾದರೂ ಅಧಿವೇಶನಗಳು ನಡೆಯಬೇಕು. ಮೋದಿ ಸರಕಾರ ಈ ಬಾರಿಯ ಸಂಸತ್ತಿನ ಅಧಿವೇಶನ ಒಂದು ವಾರಕ್ಕೆ ನಿಲ್ಲಿಸಿತು. ಮುಂದೆ ಅಧಿವೇಶನಗಳು ನಾಮಕಾವಸ್ಥೆಗೆ ನಡೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಲೇಖಕ ಶೂದ್ರ ಶ್ರೀನಿವಾಸ್, ನಿರ್ದೇಶಕ ಟಿ.ಎನ್. ಸೀತಾರಾಮ್, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಮ ಮನೋಹರ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.