ಮಾನವನ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಎಐ ಎಂದಿಗೂ ಪರ್ಯಾಯವಾಗದು : ಡಾ.ಎಂ.ಎ.ಸಲೀಂ
ಬೆಂಗಳೂರು : ಕೃತಕ ಬುದ್ಧಿಮತ್ತೆ(ಎಐ)ಯು ಮಾನವನ ವಿವೇಕ, ಸಹಾನುಭೂತಿ, ಪ್ರಾಮಾಣಿಕತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಎಂದಿಗೂ ಪರ್ಯಾಯವಾಗಲಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂಬತ್ತನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಯುವಜನರು ಪರಿವರ್ತನೆಯ ಒಂದು ಅಸಾಧಾರಣ ಯುಗದಲ್ಲಿ ಬದುಕುತ್ತಿದ್ದಾರೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಮಾತನಾಡಿ, ಬೆಂಗಳೂರು ನಗರವು ಶಿಕ್ಷಣ, ಸಂಶೋಧನೆ ಮತ್ತು ನವೀನತೆಯ ಜಾಗತಿಕ ತಾಣವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ನಿಸಾರ್ ಅಹ್ಮದ್ ಅವರು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹಿಂದಿನ 50 ವರ್ಷಗಳಿಂದ ಅವಿರತ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಒಟ್ಟು 4,830 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.ಇವರಲ್ಲಿ 35 ಚಿನ್ನದ ಪದಕ ವಿಜೇತರು, 56 ಪಿಎಚ್ಡಿ ಪದವೀಧರರು, 1,190 ಸ್ನಾತಕೋತ್ತರ ಪದವೀಧರರು ಮತ್ತು 3,584 ಪದವೀಧರರು ಸೇರಿದ್ದರು.
ಸಮಾರಂಭದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ನಿಸಾರ್ ಅಹ್ಮದ್, ಉಪಕುಲಪತಿ ಡಾ.ತಿರುವೆಂಕಟಂ, ಸಹ-ಉಪಕುಲಪತಿಗಳಾದ ಡಾ.ವಿದ್ಯಾಶಂಕರ್ಶೆಟ್ಟಿ ಮತ್ತು ಡಾ.ಶಿವಪೆರುಮಾಳ್, ಸಂಸ್ಥಾಪಕ ಟ್ರಸ್ಟಿ ಕೌಸರ್ ನಿಸಾರ್, ಉಪಾಧ್ಯಕ್ಷ ಸುಹೇಲ್ ಅಹ್ಮದ್, ಉಪಾಧ್ಯಕ್ಷ ಸಲ್ಮಾನ್ ಅಹ್ಮದ್, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.