ಸ್ಟಿಂಗ್ ಆಪರೇಶನ್ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ 'ನೈಜ ಹೋರಾಟಗಾರರ ವೇದಿಕೆ'ಯು ದಾಖಲೆಗಳೊಂದಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.

ಬೆಂಗಳೂರು: ಸದ್ಯ ರಾಜ್ಯದಲ್ಲಿ ಸ್ಟಿಂಗ್ ಅಪರೇಷನ್ ಬಗ್ಗೆ ದೊಡ್ಡ ಸಂಚಲ ಸೃಷ್ಟಿಯಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ಅಪಪ್ರಚಾರದ ವೀಡೀಯೊ ಪ್ರಸಾರ ಮಾಡದಂತೆ ನ್ಯಾಯಾಲಯದಲ್ಲಿ ತಡೆ ಕೋರಿ ಅರ್ಜಿ ಸಲ್ಲಿಸಿದ್ದಲ್ಲದೇ, ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರೆ.

ಇದರ ನಡುವೆ ಯೂಟ್ಯೂಬ್ ಒಂದರಲ್ಲಿ ಪ್ರಸಾರವಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಪ್ರಭಾವಿ ವ್ಯಕ್ತಿಗಳು ಶೋಷಣೆ ನಡೆಸಿದ್ದಾರೆ ಎಂಬ ವೀಡಿಯೋ ಆಧಾರವಾಗಿಟ್ಟುಕೊಂಡು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಬೆಂಗಳೂರಿನ 'ನೈಜ ಹೋರಾಟಗಾರರ ವೇದಿಕೆ' ಈ ಬಗ್ಗೆ ನ್ಯಾಯಾಂಗ ಸುಪರ್ದಿಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಿದೆ.

ನೈಜ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎಚ್.ಎಂ.ವೆಂಕಟೇಶ್ ಎಂಬವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಅದರಲ್ಲಿ 'KARNATAKA HONEY TRAP' ಎನ್ನುವ ಯೂಟ್ಯೂಬ್ ಚಾನಲ್ ನಲ್ಲಿ ಒಂದು ವಿಡೀಯೋ ಪ್ರಸಾರವಾಗಿದ್ದು, ಅದರಲ್ಲಿ 2011ರಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಬಗ್ಗೆ ಮೂವರು ವ್ಯಕ್ತಿಗಳು ಚರ್ಚೆ ಮಾಡುತ್ತಿರುವುದು ಕಂಡುಬಂದಿದೆ.

ಆ ವಿಡಿಯೋದ ಸಂಪೂರ್ಣ ಸಾರಾಂಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು, ರಾಕೇಶ್ ಎಂಬವರು ಹೆಸರು ಉಲ್ಲೇಖವಾಗಿದೆ. ಅಲ್ಲದೆ ಇದರಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು, ವಕೀಲರ ಹೆಸರು ಉಲ್ಲೇಖ ಇರುವುದು ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ ತನಿಖೆ ಸ್ವತಂತ್ರವಾಗಿ ನಡೆಯುವುದು ಅಸಾಧ್ಯವಾಗಿದೆ. ಹೀಗಾಗಿ ಕರ್ನಾಟಕ ಹೈಕೋರ್ಟ್ ಅಥವಾ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಎಚ್.ಎಂ.ವೆಂಕಟೇಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ..

ಮನವಿ ಪತ್ರದ ಜೊತೆಗೆ 'KARNATAKA HONEYTRAP' ಯುಟ್ಯೂಬ್ ನಲ್ಲಿ ಪ್ರಸಾರವಾಗಿದ್ದೆನ್ನಲಾದ ವಿಡೀಯೋವನ್ನು ಡೌನ್ಲೋಡ್ ಮಾಡಿ ಪೆನ್ ಡ್ರೈವ್ ನಲ್ಲಿ ಹಾಕಿ ಅದರ ಸಂಪೂರ್ಣ ಸಾರಾಂಶವನ್ನು ಲಿಖಿತವಾಗಿ ದಾಖಲಿಸಿ ಪೆನ್ ಡ್ರೈವ್ ಸಮೇತ ಸಲ್ಲಿಸಲಾಗಿದೆ.

ಈ ಬಗ್ಗೆ ಬಾಲ ನ್ಯಾಯ ಮಂಡಳಿ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೂ ನೈಜ ಹೋರಾಟಗಾರರ ವೇದಿಕೆ ಮನವಿ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor