×
Ad

ಮಡಿಕೇರಿ | ಸೈಬರ್ ಪೊಲೀಸರ ಹೆಸರಿನಲ್ಲಿ ಬೆದರಿಕೆ, ಹಣ ವಸೂಲಿ ಆರೋಪ: ಐವರ ಬಂಧನ

Update: 2025-06-25 22:47 IST

ಮಡಿಕೇರಿ : ಸೈಬರ್ ಪೊಲೀಸರ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ 7 ಲಕ್ಷ ರೂ. ವಸೂಲಿ ಮಾಡಿದ ಆರೋಪದಡಿ ಓರ್ವ ಬಾಲಕ ಸೇರಿದಂತೆ ಐವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ನಿವಾಸಿ ಪರಶಿವಮೂರ್ತಿ ಎಂಬುವವರು ನೀಡಿದ ದೂರಿನನ್ವಯ ಮಡಿಕೇರಿ ತಾಲೂಕಿನ ಬೋಯಿಕೇರಿ ಹಾಲೇರಿ ಗ್ರಾಮದ ಇಬ್ರಾಹಿಂ ಬಾದ್‌ಷಾ (25), ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಘಟ್ಟ ಗ್ರಾಮದ ರಾಘವೇಂದ್ರ ಬಿ.ಎಂ. (19), ಬೆಂಗಳೂರಿನ ಬನಶಂಕರಿಯ ಸಂಗೀತಾ (30), ಕುಶಾಲನಗರ ತಾಲೂಕಿನ ದ್ರಾವಿಡ ಕಾಲೋನಿಯ ಚರಣ್ ಸಿ.ಕೆ. (19) ಹಾಗೂ ಓರ್ವ ಬಾಲಕನನ್ನು ಬಂಧಿಸಲಾಗಿದೆ.

2024 ನವೆಂಬರ್ ತಿಂಗಳಿನಲ್ಲಿ ಪರಶಿವಮೂರ್ತಿ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಸೈಬರ್ ಪೊಲೀಸರು ಎಂದು ಪರಿಚಯಿಸಿಕೊಂಡು ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೇಸೆಜ್, ಕಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿದೆ. ನೀವು ಹಣವನ್ನು ನೀಡಿದರೆ ಸರಿ ಮಾಡುತ್ತೇನೆ, ಇಲ್ಲವಾದಲ್ಲಿ ಮನೆಯ ಬಳಿ ಬಂದು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ. ಅಕ್ಕ-ಪಕ್ಕದವರ ಮನೆಯ ಮುಂದೆ ನಿನ್ನ ಮಾನಮರ್ಯಾದೆ ಹೋಗುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಮೊಬೈಲ್‌ಗೆ ಕರೆ ಮಾಡಿ ಹೆದರಿಸಿ ಸುಮಾರು 7 ಲಕ್ಷ ರೂ. ಪಡೆದಿದ್ದಾರೆ ಎಂದು 2025 ಜನವರಿ 11ರಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಸೋಮವಾರಪೇಟೆ ಡಿವೈಎಸ್ಪಿ ಪಿ.ಚಂದ್ರಶೇಖರ್, ಪಿಐ ಪ್ರಕಾಶ್ ಬಿ.ಜಿ. ಕುಶಾಲನಗರ ಪಿಎಸೈ ಗೀತಾ ಹಾಗೂ ಠಾಣಾ ಸಿಬ್ಬಂದಿ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರ ಬಳಿಯಿಂದ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News