ಜನಾದೇಶದ ಮುಂದೆ ದುರುದ್ದೇಶಗಳು ತಲೆಬಾಗಲೇಬೇಕು : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಸತ್ಯದ ಮುಂದೆ ಕುತಂತ್ರಗಳು ಸೋಲುತ್ತವೆ, ಜನಾದೇಶದ ಮುಂದೆ ದುರುದ್ದೇಶಗಳು ತಲೆಬಾಗಲೇಬೇಕು. ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದಲೆ ಎಂ.ಕೆ.ಪ್ರಾಣೇಶ್ ಅವರನ್ನು ವಜಾಗೊಳಿಸಿ ನೀಡಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ಹಾಕಿರುವ ಅವರು, ಜನರು ನೀಡಿದ ಸ್ಪಷ್ಟ ಜನಾದೇಶವನ್ನು ಕಾನೂನು ಪ್ರಕ್ರಿಯೆಯ ದುರ್ಬಳಕೆಯ ಮೂಲಕ ವಿಕೃತಗೊಳಿಸುವ ಎಲ್ಲ ಪ್ರಯತ್ನಗಳಿಗೆ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಸರ್ವೋಚ್ಚ. ಅದನ್ನು ರಾಜಕೀಯ ಕುತಂತ್ರಗಳಿಂದಲೋ, ನ್ಯಾಯಾಂಗವನ್ನು ರಾಜಕೀಯ ಹೋರಾಟದ ವೇದಿಕೆಯನ್ನಾಗಿ ಬಳಸುವುದರ ಮೂಲಕವೋ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನ ಮತ್ತು ನ್ಯಾಯಾಂಗವು ಮತ್ತೊಮ್ಮೆ ಜನರ ವಿಶ್ವಾಸವನ್ನೆ ಎತ್ತಿಹಿಡಿದಿವೆ. ಈ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳ ಗೆಲುವು, ಜನಾದೇಶದ ಗೆಲುವು ಮತ್ತು ಸತ್ಯದ ಗೆಲುವು ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಈ ನ್ಯಾಯಸಮ್ಮತ ಹೋರಾಟದಲ್ಲಿ ದೃಢವಾಗಿ ನಿಂತು ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ‘ಗಾಯತ್ರಿ ಶಾಂತೇಗೌಡ’ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜನಸೇವೆಯ ಅವರ ಪಯಣ ಇನ್ನಷ್ಟು ಅರ್ಥಪೂರ್ಣವಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.