×
Ad

ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿನ ವಿಕೇಂದ್ರೀಕರಣದಲ್ಲಿ ಕರ್ನಾಟಕ ಭಾರೀ ಹಿನ್ನಡೆ

► ನಗರಗಳಿಗೆ ಕಡಿಮೆಯಾಗುತ್ತಿರುವ ಅನುದಾನ, ಕುಗ್ಗುತ್ತಿರುವ ಸ್ವಾಯತ್ತತೆ ► ‘ಜನಾಗ್ರಹ ಸಂಸ್ಥೆ’ಯ ವಿಶ್ಲೇಷಣಾತ್ಮಕ ವಿಮರ್ಶೆ ವರದಿಯಲ್ಲಿ ಬಹಿರಂಗ

Update: 2026-07-15 23:47 IST

ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ರಾಜ್ಯದಲ್ಲಿ ನಗರೀಕರಣ ವೇಗವಾಗಿ ಹೆಚ್ಚಾಗುತ್ತಿದ್ದರೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿನ ಅಧಿಕಾರ ಮತ್ತು ಸಂಪನ್ಮೂಲಗಳ ಹಂಚಿಕೆ ಕ್ರಮೇಣ ದುರ್ಬಲಗೊಳ್ಳುತ್ತಿದೆ ಎಂದು ಕರ್ನಾಟಕದ ನಗರಗಳಲ್ಲಿ ವಿಕೇಂದ್ರೀಕೃತ ಸಹಭಾಗಿತ್ವದ ಆಡಳಿತದ ವಿಶ್ಲೇಷಣಾತ್ಮಕ ವಿಮರ್ಶೆ ವರದಿಯಲ್ಲಿ ತಿಳಿದುಬಂದಿದೆ.

ಜನಾಗ್ರಹ ಸಂಸ್ಥೆಯು 5ನೇ ರಾಜ್ಯ ಹಣಕಾಸು ಆಯೋಗದ ವರದಿ ಹಾಗೂ ಅದರ ಕುರಿತು ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ವಿಶ್ಲೇಷಣೆ ನಡೆಸಿದ್ದು, ಈ ಸಂಬಂಧ ಬುಧವಾರ ಸಂಸ್ಥೆಯು ನಡೆಸಿದ ಆನ್‌ಲೈನ್ ಮಾಧ್ಯಮ ಸಂವಾದದಲ್ಲಿ ಹಣಕಾಸಿನ ವಿಕೇಂದ್ರೀಕರಣದಲ್ಲಿ ಕರ್ನಾಟಕ ಹಿನ್ನಡೆ ಅನುಭವಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ.

ರಾಜ್ಯದ ಪ್ರತಿ ಇಬ್ಬರು ನಿವಾಸಿಗಳಲ್ಲಿ ಒಬ್ಬರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೂ, ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಅಗತ್ಯವಾದ ಹಣಕಾಸಿನ ಸ್ವಾಯತ್ತತೆ, ಬಳಕೆಯ ಸ್ವಾತಂತ್ರ್ಯ ಮತ್ತು ಸಂಪನ್ಮೂಲಗಳನ್ನು ಕ್ರಮೇಣ ಕಳೆದುಕೊಳ್ಳುತ್ತಿವೆ ಎಂಬುದನ್ನು ತನ್ನ ವಿಶ್ಲೇಷಣಾತ್ಮಕ ವರದಿಯಲ್ಲಿ ಜನಾಗ್ರಹ ಸಂಸ್ಥೆ ತಿಳಿಸಿದೆ.

5ನೇ ರಾಜ್ಯ ಹಣಕಾಸು ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಇದುವರೆಗಿನ ಅತಿದೊಡ್ಡ ಹಣಕಾಸು ಹಂಚಿಕೆಯನ್ನು ಶಿಫಾರಸು ಮಾಡಿದ್ದರೂ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕ ಪಾಲು ದೊರೆತಿಲ್ಲ. ರಾಜ್ಯದ ಒಟ್ಟು ಆದಾಯದ ಶೇ.60ರಷ್ಟು ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಈ ಪೈಕಿ ಶೇ.25ರಷ್ಟು ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಶೇ.75ರಷ್ಟು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಸಂಸ್ಥೆಯ ವಿಶ್ಲೇಷಣಾತ್ಮಕ ವರದಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ರಾಜ್ಯದ ನಗರೀಕರಣ ಪ್ರಮಾಣ ಶೇ.46ರಷ್ಟಿದ್ದರೂ, ನಗರ ಸ್ಥಳೀಯ ಸಂಸ್ಥೆಗಳಿಗೆ ಕೇವಲ ಶೇ.25ರಷ್ಟು ಪಾಲು ಮಾತ್ರ ಶಿಫಾರಸು ಮಾಡಲಾಗಿದೆ. ಈ ವಿಷಯದಲ್ಲಿ ಕರ್ನಾಟಕವು ಸಮಾನ ರಾಜ್ಯಗಳಿಗಿಂತ ಹಿಂದುಳಿದಿದೆ ಎಂದು ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ರಾಜ್ಯದ ಒಟ್ಟು ಆದಾಯದ ಶೇ.50ರಷ್ಟು ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡುವುದಾಗಿ ಸರಕಾರ ಘೋಷಿಸಿದೆ. ಈ ಪೈಕಿ ಶೇ.70ರಷ್ಟು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಶೇ.30ರಷ್ಟು ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದೆ. ಇದರಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಷಿಕ ಸುಮಾರು 34,052 ಕೋಟಿ ರೂ.ಲಭ್ಯವಾಗಬೇಕಿತ್ತು. ಆದರೆ, ವಾಸ್ತವ ಚಿತ್ರಣ ಭಿನ್ನವಾಗಿದೆ ಎಂದು ಜನಾಗ್ರಹ ಸಂಸ್ಥೆಯ ವಿಶ್ಲೇಷಣಾತ್ಮಕ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳು ಈಗ 16ನೇ ಕೇಂದ್ರ ಹಣಕಾಸು ಆಯೋಗದ ಅನುದಾನವನ್ನು ಹೆಚ್ಚಾಗಿ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 16ನೇ ಹಣಕಾಸು ಆಯೋಗವು ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಇದುವರೆಗೆ ದೊರೆತಿರುವ ಅತಿ ದೊಡ್ಡ ಅನುದಾನ ಪ್ಯಾಕೇಜ್ ಆಗಿರುವ ಐದು ವರ್ಷಗಳಿಗೆ 18,483 ಕೋಟಿ ರೂ. (ವಾರ್ಷಿಕ ಸುಮಾರು 3,700 ಕೋಟಿ ರೂ.) ಅನುದಾನವನ್ನು ಶಿಫಾರಸು ಮಾಡಿದೆ ಎಂದು ಜನಾಗ್ರಹ ಸಂಸ್ಥೆಯು ತಿಳಿಸಿದೆ.

ಈ ಸಂಬಂಧ ಮಾಧ್ಯಮ ಸಂವಾದದಲ್ಲಿ ಜನಾಗ್ರಹ ಸಂಸ್ಥೆಯ ಹಿರಿಯ ಸಲಹೆಗಾರ(ನೀತಿ ಸಮನ್ವಯ) ಸಂತೋಷ್ ನರಗುಂದ್, ರಾಜ್ಯದ ಜನಾಗ್ರಹ ಸಂಸ್ಥೆಯ ಹಿರಿಯ ವ್ಯವಸ್ಥಾ ಪಕ(ಸಾರ್ವಜನಿಕ ಹಣಕಾಸು) ಮನೀಷಾ ಮರುಳಸಿದ್ದಪ್ಪ ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾದ ಹಣ ಗ್ಯಾರಂಟಿಗಳಿಗೆ ಬಳಕೆ..!

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾದ ನಿಧಿಯ ಸುಮಾರು ಮೂರನೇ ಒಂದು ಭಾಗವನ್ನು ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಸೇರಿದಂತೆ ರಾಜ್ಯ ಸರಕಾರದ ಯೋಜನೆಗಳಿಗೆ ಬಳಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಪಾಲಿನ 8,023 ಕೋಟಿ ರೂ. ಮೊತ್ತವನ್ನು ವಿವಿಧ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ಜನಾಗ್ರಹ ಸಂಸ್ಥೆಯು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News