×
Ad

ಕೆಎಸ್‌ಸಿಎಸ್‌ಟಿಯಲ್ಲಿ ಸಾರ್ವಜನಿಕ ಹಣ ದುರ್ಬಳಕೆ, ನೇಮಕಾತಿ ಅಕ್ರಮದ ಆರೋಪ: ಲೋಕಾಯುಕ್ತಕ್ಕೆ ದೂರು ದಾಖಲು

Update: 2026-07-15 23:33 IST

ಬೆಂಗಳೂರು  : ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ, ರಾಜ್ಯ ಸರಕಾರದ ಅನುದಾನಿತ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ (ಕೆಎಸ್‌ಸಿಎಸ್‌ಟಿ) ಸಾರ್ವಜನಿಕ ಹಣದ ದುರ್ಬಳಕೆ, ನಿಯಮಬಾಹಿರ ನೇಮಕಾತಿ ಮತ್ತು ಮಾಹಿತಿ ಮುಚ್ಚಿಡುವಿಕೆ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.

ಕೆಎಸ್‌ಸಿಎಸ್‌ಟಿಯ ಮಾಜಿ ಪ್ರಾಜೆಕ್ಟ್ ಇಂಜಿನಿಯರ್ ಡಾ.ಸೈಯದ್ ಸಮೀರ್ ಅವರು ಜು.13ರಂದು ಸಲ್ಲಿಸಿರುವ ದೂರನ್ನು ಲೋಕಾಯುಕ್ತ ಕಚೇರಿ ಪ್ರಕರಣ ಸಂಖ್ಯೆ COMPT/LOK/BCD/3952/2026 ಆಗಿ ನೋಂದಾಯಿಸಿಕೊಂಡಿದ್ದು, ವಿಚಾರಣಾಧಿಕಾರಿARE-10 ಅವರಿಗೆ ಹಂಚಿಕೆ ಮಾಡಿದೆ.

41 ಪುಟಗಳ ಈ ದೂರಿನಲ್ಲಿ, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ.ಅಶೋಕ್ ಎಂ. ರಾಯಚೂರು, ಮಾಜಿ ಪ್ರಭಾರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹೇಮಂತ್ ಕುಮಾರ್ ಎಚ್. ಮತ್ತು ಡಾ.ಯು.ಟಿ.ವಿಜಯ್ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಜೊತೆಗೆ, ಆಕ್ಷೇಪಾರ್ಹ ಪಾವತಿ ಮತ್ತು ನೇಮಕಾತಿಗಳಿಗೆ ಅನುಮೋದನೆ ನೀಡಿದ ಇತರ ಅಧಿಕಾರಿಗಳನ್ನು ತನಿಖೆಯ ವೇಳೆ ಗುರುತಿಸಬೇಕೆಂದು ದೂರಿನಲ್ಲಿ ಕೋರಲಾಗಿದೆ.

ಸಂಬಳದ ಜೊತೆಗೆ ಗೌರವಧನ, ಸಲಹಾ ಶುಲ್ಕ: ಕೆಎಸ್‌ಸಿಎಸ್‌ಟಿಯ 2022ರ ಮೇ 31ರ ಆದೇಶದ ಮೂಲಕ ಈಗಾಗಲೇ ನಿಯಮಿತ ಸಂಬಳ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಒಟ್ಟು 10,43,176 ರೂ.ಮೊತ್ತವನ್ನು ಸಲಹಾ/ಕನ್ಸಲ್ಟೆನ್ಸಿ ಶುಲ್ಕವಾಗಿ ವಿತರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಲ್ಲದೆ, 2021ರ ಸೆ.21 ಮತ್ತು 2022ರ ಮಾ.16ರ ಎರಡು ಪ್ರತ್ಯೇಕ ಆದೇಶಗಳ ಮೂಲಕ, ಸಿಬ್ಬಂದಿಯ ದೈನಂದಿನ ಕರ್ತವ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಗೌರವಧನ ಪಾವತಿಸಲಾಗಿದೆ. ನಿಯಮಿತ ಸಂಬಳ ಪಡೆಯುವ ಸಿಬ್ಬಂದಿಗೆ, ಅವರ ಸಾಮಾನ್ಯ ಕರ್ತವ್ಯದ ಕೆಲಸಕ್ಕೆ ಸಕ್ಷಮ ಪ್ರಾಧಿಕಾರದ ಕಾನೂನುಬದ್ಧ ಮಂಜೂರಾತಿ ಇಲ್ಲದೆ ಇಂತಹ ಪಾವತಿ ಮಾಡುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಭಾಷಾ ಕಾಯ್ದೆ ಕಡೆಗಣನೆ ಆರೋಪ: 2020ರ ಅ.1ರ ಮೊದಲ ನೇಮಕಾತಿ ಅಧಿಸೂಚನೆಯು ಎಸೆಸೆಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿರುವುದನ್ನು ಕಡ್ಡಾಯ ಷರತ್ತಾಗಿ ವಿಧಿಸಿದ್ದರೂ, ಕನ್ನಡವನ್ನು ತೃತೀಯ ಭಾಷೆಯಾಗಿ ಮಾತ್ರ ಓದಿದ ಅಭ್ಯರ್ಥಿಗಳು ಹಾಗೂ ನಿಗದಿತ ಕನಿಷ್ಠ ಶೇ.50ರ ಬದಲು ಪದವಿಯಲ್ಲಿ ಶೇ.44.23 ಅಂಕ ಪಡೆದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಅರ್ಹ ಕಾಯುವಿಕೆ ಪಟ್ಟಿ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರಗಳ ಯಾವುದೇ ಹಿನ್ನೆಲೆ ಪರಿಶೀಲನೆ ನಡೆದಿಲ್ಲ ಎಂಬುದನ್ನು ಸಂಸ್ಥೆಯ ಮಾಹಿತಿ ಹಕ್ಕು ಉತ್ತರವೆ ಒಪ್ಪಿಕೊಂಡಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ, 2022 ಜಾರಿಗೆ ಬಂದ ನಂತರವೂ, 2025ರ ಮೇ 9 ಮತ್ತು 2026ರ ಮಾ.23ರ ನೇಮಕಾತಿ ಅಧಿಸೂಚನೆಗಳಲ್ಲಿ ‘ಪ್ರಥಮ/ದ್ವಿತೀಯ / ತೃತೀಯ ಭಾಷೆ’ ಎಂದು ಕನ್ನಡದ ಷರತ್ತನ್ನು ದುರ್ಬಲಗೊಳಿಸಿ, ಕಾಯ್ದೆಯ ಕಲಂ 15ನ್ನು ನೇರವಾಗಿ ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

17 ಆರ್‌ಟಿಐ ಅರ್ಜಿಗಳು: 2026ರ ಎಪ್ರಿಲ್ ನಲ್ಲಿ ಸಲ್ಲಿಸಿದ 17 ಮಾಹಿತಿ ಹಕ್ಕು ಅರ್ಜಿಗಳಿಗೆ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಉತ್ತರಗಳಲ್ಲಿ, ಎರಡು ಬಾರಿ ಲಗತ್ತಿಸದ ದಾಖಲೆಗಳನ್ನು ‘ಲಗತ್ತಿಸಲಾಗಿದೆ’ ಎಂದು ದೃಢೀಕರಿಸಲಾಗಿದೆ. ಪಾವತಿ ವೋಚರ್‌ಗಳು, ಮಂಜೂರಾತಿ ಟಿಪ್ಪಣಿಗಳು, ಆಯ್ಕೆ ಸಮಿತಿ ರಚನಾ ಆದೇಶಗಳು ಮತ್ತು ಅರ್ಹತಾ ಪರಿಶೀಲನಾ ದಾಖಲೆಗಳನ್ನು ನಿರಾಕರಿಸಲಾಗಿದೆ.

2019-20ರಿಂದ 2025-26ರವರೆಗಿನ ಏಳು ಆರ್ಥಿಕ ವರ್ಷಗಳ ಸಿಎಜಿ ಲೆಕ್ಕಪರಿಶೋಧನಾ ವರದಿಗಳನ್ನು ಸಂಪೂರ್ಣ ತಡೆಹಿಡಿಯಲಾಗಿದೆ. ಮತ್ತು ಮೈಸೂರು ಹಾಗೂ ಕೊಪ್ಪದಲ್ಲಿ ಬುಡಕಟ್ಟು ಸಮುದಾಯಕ್ಕಾಗಿ ಕೈಗೊಂಡ 7.5 ಕೋಟಿ ರೂ. ವೆಚ್ಚದ ಅರಣ್ಯೇತರ ಉತ್ಪನ್ನ ಸಂಸ್ಕರಣಾ ಕೇಂದ್ರ ಯೋಜನೆಯ ಸಮಗ್ರ ದಾಖಲೆಗಳನ್ನೂ ನಿರಾಕರಿಸಲಾಗಿದೆ.

ಪೊಲೀಸ್ ವಿಭಾಗ/ತಾಂತ್ರಿಕ ಲೆಕ್ಕಪರಿಶೋಧನಾ ಘಟಕದಿಂದ ಸಮಗ್ರ ತನಿಖೆ, ತಡೆಹಿಡಿಯಲಾದ ಎಲ್ಲ ದಾಖಲೆಗಳ ಸಮನ್ಸ್ ಮತ್ತು ಸಂರಕ್ಷಣೆ, ಪ್ರತಿ ಪಾವತಿಗೆ ಸಹಿ ಮಾಡಿ ಮಂಜೂರಾತಿ ನೀಡಿದ ಪ್ರತಿಯೊಬ್ಬ ಅಧಿಕಾರಿಯ ಗುರುತಿಸುವಿಕೆ, ಅಕ್ರಮವಾಗಿ ವಿತರಿಸಲಾದ ಸಾರ್ವಜನಿಕ ಹಣದ ವಸೂಲಾತಿಯ ಶಿಫಾರಸು ಹಾಗೂ ದೂರಿನ ಬಗ್ಗೆ ಯಾವುದೇ ಪ್ರತಿಕೂಲ ತೀರ್ಮಾನಕ್ಕೂ ಮುನ್ನ ವೈಯಕ್ತಿಕ ವಿಚಾರಣೆಯ ಅವಕಾಶ ಕಲ್ಪಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News