×
Ad

ಆರೆಸ್ಸೆಸ್ ನೋಂದಣಿ ವಿಚಾರ | ಪ್ರಿಯಾಂಕ್ ಖರ್ಗೆ ಪರ ನಿರ್ಣಯ ಕೈಗೊಳ್ಳಬೇಕು : ಎಚ್.ಗೋವಿಂದಯ್ಯ

ಪಂಚಮ ಪತ್ರಿಕೆಯ ಸಂಪುಟಗಳ ಬಿಡುಗಡೆ

Update: 2026-07-15 23:38 IST

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್)ದ ನೋಂದಣಿ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿಲುವಿಗೆ ಕರ್ನಾಟಕ ರಾಜ್ಯದ ಎಲ್ಲ ಸಾಹಿತಿಗಳು, ದಲಿತ ಹೋರಾಟಗಾರರು, ಪ್ರಜ್ಞಾವಂತರು ಅವರ ಜೊತೆಗಿದ್ದೇವೆ ಎನ್ನುವ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಹೋರಾಟಗಾರ, ಕವಿ ಎಚ್.ಗೋವಿಂದಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ನಯನ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ವತಿಯಿಂದ ಆಯೋಜಿಸಿದ್ದ ‘ಪಂಚಮ ಪತ್ರಿಕೆ’ಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುರ್ತು ಪರಿಸ್ಥಿತಿಯನ್ನು ಕರ್ನಾಟಕದ ದಲಿತರು ಎದುರಿಸಿದ್ದೇವೆ. ಆದರೆ ಆರೆಸ್ಸೆಸ್‌ನ ವಿಷಕಾರಿ, ವಿನಾಶಕಾರಿ ತುರ್ತು ಪರಿಸ್ಥಿತಿಯನ್ನು ಎದುರಿಸದಿದ್ದರೆ ದೇಶದ ದಲಿತರ ಸರ್ವನಾಶವಾಗುವುದು ನಿಶ್ಚಿತ. ಈ ಸರ್ವನಾಶ ಸನ್ನಿಹಿತವಾಗತೊಡಗಿದೆ ಎಂದು ಎಚ್.ಗೋವಿಂದಯ್ಯ ಆತಂಕ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ‘ಪಂಚಮದ ಬಗ್ಗೆ ದಲಿತ ಚಳವಳಿಯ ಬಗ್ಗೆ ತುಂಬಾ ತಪ್ಪು, ಸತ್ಯಕ್ಕೆ ದೂರವಾದ ವಿಚಾರಗಳನ್ನು ಬಹಳಷ್ಟು ಜನರು ಬರೆದಿದ್ದಾರೆ. ಆ ಪ್ರಬಂಧಗಳಿಗೆ ವಿವಿಗಳು ಡಾಕ್ಟರೇಟ್ ಕೊಟ್ಟಿವೆ. ಒಂದು ಸಣ್ಣ ಕ್ಷೇತ್ರ ಕಾರ್ಯ ಮಾಡದೇ ತಪ್ಪುಗಳನ್ನೇ ಬರೆದು ಪಿಎಚ್‌ಡಿ ತೆಗೆದುಕೊಂಡಿದ್ದಾರೆ. ಆದುದರಿಂದ ವಿಶ್ವವಿದ್ಯಾನಿಲಯಗಳು ಸಂತೆಯ ಸರಕುಗಳಾಗಬಾರದು. ಬಹುತೇಕ ವಿವಿಗಳು ಸಂತೆಯ ಸರಕುಗಳಾಗಿವೆ ಎಂದು ಅವರು ಬೇಸರ ವ್ಯಕ್ತಪಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಹಿರಿಯ ಪತ್ರಕರ್ತರಾದ ರಾಮದೇವ ರಾಕೆ, ಡಾ.ಎಸ್.ನರೇಂದ್ರಕುಮಾರ್, ಶಿವಾಜಿ ಗಣೇಶನ್, ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ದೇವನೂರು ಶಿವಮಲ್ಲು, ಹುಲ್ಲುಕರೆ ಮಹದೇವ, ಎಂ.ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News