×
Ad

ಸಮಾಜದ ಹಿತಕ್ಕಾಗಿ ಸ್ವಯಂ ಪ್ರೇರಣೆಯಿಂದ ಆಸ್ತಿ ಸಮರ್ಪಿಸುವುದು ವಕ್ಫ್ : ಮೌಲಾನಾ ಮಲಿಕ್ ಮೊಹತಶಿಮ್ ಖಾನ್

‘ವಕ್ಫ್ ಆಸ್ತಿ ಸಂರಕ್ಷಣೆ, ಸಮುದಾಯದ ಜವಾಬ್ದಾರಿ: ರಾಜ್ಯಮಟ್ಟದ ಕಾರ್ಯಾಗಾರ’

Update: 2025-11-10 19:35 IST

ಬೆಂಗಳೂರು : ತನ್ನ ಸ್ವಂತ ಆಸ್ತಿಯನ್ನು ಸಮಾಜದ ಹಿತಕ್ಕಾಗಿ ಸ್ವಯಂ ಪ್ರೇರಣೆಯಿಂದ ಸಮರ್ಪಿಸುವುದು ವಕ್ಫ್ ಆಗಿದ್ದು, ಇತರರ ಭೂಮಿಯನ್ನು ಕಬಳಿಸುವುದು ಅಲ್ಲ. ಇಸ್ಲಾಮ್ ಇದಕ್ಕೆ ಯಾವ ರೀತಿಯ ಅನುಮತಿಯನ್ನು ನೀಡುವುದಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮೌಲಾನಾ ಮಲಿಕ್ ಮೊಹತಶಿಮ್ ಖಾನ್ ತಿಳಿಸಿದರು.

ಸೋಮವಾರ ನಗರದ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ‘ವಕ್ಫ್ ಆಸ್ತಿ ಸಂರಕ್ಷಣೆ, ಸಮುದಾಯದ ಜವಾಬ್ದಾರಿ’ ವಿಷಯಾಧಾರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಭಾಷಣ ಮಾಡಿದರು.

ಇಸ್ಲಾಮ್ ಎರಡು ಆಧಾರಗಳ ಮೇಲೆ ನಿಂತಿದೆ. ಒಂದು ಅಲ್ಲಾಹನ ಆರಾಧನೆ ಮತ್ತು ಇನ್ನೊಂದು ಮಾನವ ಸೇವಾ ತತ್ವ. ವಕ್ಫ್ ಎಂದರೆ ಈ ಮಾನವ ಸೇವೆಯ ಭಾಗವಾಗಿದೆ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಮಾತ್ರ ಇಸ್ಲಾಮ್ ಮತ್ತು ಮುಸ್ಲಿಮರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಅವರು ಹೇಳಿದರು.

ವಕ್ಫ್ ಆಸ್ತಿಯ ಸಂರಕ್ಷಣೆಯು ಕೇವಲ ಕಾನೂನು ಬದ್ಧವಾದ ಕೆಲಸವಲ್ಲ. ಅದು ಧಾರ್ಮಿಕ ಮತ್ತು ನೈತಿಕ ಕರ್ತವ್ಯವೂ ಹೌದು ಎಂಬುದನ್ನು ನಾವು ಮರೆಯಬಾರದು. 1923 ರಿಂದ ಇಂದಿನವರೆಗೆ ನಡೆದ ಬಹುತೇಕ ವಕ್ಫ್ ಕಾಯ್ದೆಯ ತಿದ್ದುಪಡಿಗಳು ಮುಸ್ಲಿಮ್ ಸಮುದಾಯದ ಹಿತಕ್ಕೆ ಆಗಿದ್ದವು, ಆದರೆ 2025ರ ವಕ್ಫ್ ತಿದ್ದುಪಡಿ ಕಾಯ್ದೆ ಯಾವುದೆ ರೀತಿಯ ಪ್ರಯೋಜನಕಾರಿಯಲ್ಲ ಎಂದು ಅವರು ಹೇಳಿದರು.

ನಾವು ನಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ. ಕೆಲವು ಅಂಶಗಳು ನಮ್ಮ ಹೆಸರನ್ನು ಬಳಸಿಕೊಂಡು ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ, ಆದರೆ ನಿಜವಾದ ಅಪಾಯವು ಸಮುದಾಯ ವಿರೋಧಿ ತತ್ವಗಳಿಂದ ಬರುತ್ತಿದೆ ಎಂದು ಮಲಿಕ್ ಮೊಹತಶಿಮ್ ಖಾನ್ ಆತಂಕ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ಇನಾಮುರ್ರಹ್ಮಾನ್ ಖಾನ್ ಮಾತನಾಡಿ, ಜಮಾಅತ್ ತನ್ನ ಆರಂಭದಿಂದಲೆ ವಕ್ಫ್ ಆಸ್ತಿಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿದೆ. ಕೇಂದ್ರ ಸರಕಾರವು ತಿದ್ದುಪಡಿ ಮಸೂದೆ ತಂದಾಗ ಜಮಾಅತ್ ಅದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತು ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‍ನಲ್ಲಿಯೂ ತನ್ನ ಪಾತ್ರವನ್ನು ನಿರ್ವಹಿಸಿದೆ ಎಂದು ಹೇಳಿದರು.

ಉಮೀದ್ ಪೋರ್ಟಲ್‍ಗೆ ವಕ್ಫ್ ಆಸ್ತಿಗಳ ದಾಖಲೆಗಳನ್ನು ಅಪ್‍ಲೋಡ್ ಮಾಡುವ ವಿಧಾನವನ್ನು ಪವರ್ ಪಾಯಿಂಟ್ ಪ್ರಸ್ತುತಿಯ ಮೂಲಕ ವಿವರಿಸಿದ ಅವರು, ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ರಾಜ್ಯ ವಕ್ಫ್ ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಾಜುದ್ದೀನ್ ಖಾನ್ ಮಾತನಾಡಿ, ರಾಜ್ಯದಲ್ಲಿನ ಎಲ್ಲ ವಕ್ಫ್ ಆಸ್ತಿಗಳ ದಾಖಲೆಗಳನ್ನು ಶೀಘ್ರದಲ್ಲೇ ಉಮೀದ್ ಪೋರ್ಟಲ್‍ನಲ್ಲಿ ದಾಖಲಿಸಲು ಬೋರ್ಡ್ ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ ಮಾತನಾಡಿ, ರಾಜ್ಯದಲ್ಲಿ 49 ಸಾವಿರ ವಕ್ಫ್ ಆಸ್ತಿಗಳಲ್ಲಿ 33 ಆಸ್ತಿಗಳಿಗೆ ಮುತವಲ್ಲಿ, ಅಧ್ಯಕ್ಷರು ಅಥವಾ ಚೇರ್ಮನ್‍ಗಳು ನಿಯೋಜಿತರಾಗಿದ್ದಾರೆ. ಉಳಿದ ಆಸ್ತಿಗಳನ್ನು ಗುರುತಿಸುವುದು ಮತ್ತು ನಿಗಾ ವಹಿಸುವುದು ನಮ್ಮ ತುರ್ತು ಜವಾಬ್ದಾರಿ. ಈ ಸಂಬಂಧ ಜಿಲ್ಲಾಮಟ್ಟದಲ್ಲಿ ದುಂಡು ಮೇಜಿನ ಸಭೆಗಳು ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಕೇಂದ್ರ ಸರಕಾರವು 2025ರ ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ನಮ್ಮ ಸಮುದಾಯದ ಮನೋಬಲವನ್ನು ಕುಗ್ಗಿಸಲು ಯತ್ನಿಸುತ್ತಿದೆ. ಆದರೆ ಭಾರತದ ಮುಸ್ಲಿಮ್ ಸಮುದಾಯವು ಈ ಕಾಯ್ದೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಸೈಯ್ಯದ್ ಮುಜೀರ್ ಹಾಶ್ಮಿ ಸ್ವಾಗತ ಭಾಷಣ ಮಾಡಿದರು. ಸೈಯ್ಯದ್ ನಾಸಿರ್ ಅಲಿ ಬಳ್ಳಾರಿ ಮತ್ತು ರಿಯಾಝ್ ಅಹ್ಮದ್ ಕೊಪ್ಪಳ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಮುಹಮ್ಮದ್ ಮರಕಡ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮುಹಮ್ಮದ್ ತಲ್ಹಾ ಸಿದ್ದಿ ಬಾಪಾ ಮತ್ತು ಅವರ ತಂಡ ಕೈಗೊಂಡಿತ್ತು.

ವಕ್ಫ್ ಆಸ್ತಿಗಳ ಸಂರಕ್ಷಣೆ, ಜಾಗೃತಿ ಮತ್ತು ಅವುಗಳ ದಾಖಲೆಗಳನ್ನು ಕೇಂದ್ರ ಸರಕಾರದ ಉಮೀದ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 125ಕ್ಕೂ ಹೆಚ್ಚು ವಕ್ಫ್ ಪ್ರತಿನಿಧಿಗಳು ಭಾಗವಹಿಸಿದ್ದರು.

ವಕ್ಫ್ ಆಸ್ತಿಯ ಸಂರಕ್ಷಣೆ ಕೇವಲ ಕಾನೂನು ಬದ್ದ ಕರ್ತವ್ಯವಲ್ಲ, ಅದು ಒಂದು ಧಾರ್ಮಿಕ ಮತ್ತು ಸಾಮಾಜಿಕ ಬದ್ಧತೆ. ಭವಿಷ್ಯದ ಪೀಳಿಗೆಯ ಶಿಕ್ಷಣ, ಕಲ್ಯಾಣ ಮತ್ತು ಸಮುದಾಯ ಸೇವೆಯ ಭದ್ರತೆಯ ಮೂಲಸ್ತಂಭವಾಗಿದೆ. ಆದುದರಿಂದ, ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News