ಸರಕಾರಿ ಕಾರ್ಯಕ್ರಮಗಳಲ್ಲಿ ವೈದಿಕ ಆಚರಣೆಗೆ ಮಾವಳ್ಳಿ ಶಂಕರ್ ಆಕ್ಷೇಪ

Update: 2026-08-20 20:07 IST

ಬೆಂಗಳೂರು : ಸರಕಾರಿ ಕಾರ್ಯಕ್ರಮಗಳಲ್ಲಿ ವೈದಿಕ ಆಚರಣೆಗಳು ವ್ಯಾಪಕವಾಗುತ್ತಿವೆ. ಒಂದೊಂದು ಮಂತ್ರಿ ಮಂಡಲ ಬಂದಾಗಲೂ ವಿದಾನಸೌಧದ ಕಚೇರಿಗಳನ್ನು ಮಾರ್ಪಾಡು ಮಾಡುವ ಕೆಲಸ ಸಲ್ಲ, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.

ಗುರುವಾರ ವೀಂದ್ರ ಕಲಾಕ್ಷೇತ್ರ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ವೇದಿಕೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ 51ಎ(ಎಚ್) ಬೋಧಿಸಿ ಮಾತನಾಡಿದ ಅವರು, ವೈಜ್ಞಾನಿಕ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುವಂತಾಗಬೇಕು. ಅಂಬೇಡ್ಕರ್, ಗಾಂಧಿ, ಕುವೆಂಪು ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಬೇಕು ಎಂದರು.

ವಿಜ್ಞಾನಿ ಡಾ.ಎಸ್.ಚಟರ್ಜಿ ಮಾತನಾಡಿ, ಡಾ.ನರೇಂದ್ರ ದಾಬೋಳ್ಕರ್ ಹತ್ಯೆ ಇಡೀ ಜಗತ್ತಿನ ಗಮನ ಸೆಳೆದಿದೆ. ಪ್ರಶ್ನೆ ಮಾಡುವ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇದರ ವಿರುದ್ದ ವಿಜ್ಞಾನಿಗಳೂ ಸೇರಿದಂತೆ ಎಲ್ಲ ಸಂಘಟನೆಗಳು ಒಗ್ಗೂಡಬೇಕು ಎಂದು ತಿಳಿಸಿದರು.

ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ನಾವುಗಳು ಮೌಢ್ಯ, ಕಂದಚಾರಗಳ ಜೊತೆಗೆ ಭ್ರಷ್ಟಾಚಾರವನ್ನು ಪ್ರಶ್ನಿಸಬೇಕಿದೆ. ಆದರೆ, ಪ್ರಶ್ನಿಸುವವರನ್ನು ಮುಗಿಸುವ ವ್ಯವಸ್ಥೆಯಡಿಯಲ್ಲಿ ನಾವುಗಳು ಇದ್ದೇವಾದರೂ, ಎದೆಗುಂದದೆ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕಿದೆ. ಭಯವೇ ಮೌಢ್ಯದ ಮೂಲ ಬೀಜವಾಗಿದ್ದು, ಭಯಕ್ಕೆ ಅವಕಾಶ ಕೊಡದೆ ಆತ್ಮಬಲ ಹೆಚ್ಚಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕ ಜನಶಕ್ತಿ ಗೌರವಾಧ್ಯಕ್ಷ ಪ್ರೊ.ನಗರಗೆರೆ ರಮೇಶ್ ಮಾತನಾಡಿ, ಮೌಢ್ಯಾಚರಣೆ ತೊಲಗಲು ರಾಜಕೀಯ ಬದಲಾವಣೆಗಳಾಗಬೇಕು. ರಾಜಕೀಯವನ್ನು ಹೊರತುಪಡಿಸಿ, ವೈಜ್ಞಾನಿಕ ಮನೋಭಾವದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ವೈಚಾರಿಕ ಆಂದೋಲನ ರೂಪಿಸಲು ಪ್ರಗತಿಪರ ಸಂಘಟನೆಗಳು ಒಗ್ಗೂಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಬುದ್ಧ ಸಮಾಜ ವೇದಿಕೆಯ ಎಚ್.ಕೆ.ವಿವೇಕಾನಂದ, ಪತ್ರಕರ್ತೆ ಶಶಿಕಲಾ, ವೇದಿಕೆಯ ಪದಾಧಿಕಾರಿಗಳಾದ ಈ.ಬಸವರಾಜು, ನಾ.ಶ್ರೀಧರ್, ಕೆ.ಬಿ.ಮಹದೇವಪ್ಪ, ಗೋವಿಂದರಾಜ್ ಪಟೇಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News