×
Ad

ಗಾಂಧೀಜಿ ಬರೆದಿರುವ ‘ನನ್ನ ಸತ್ಯಾನ್ವೇಷಣೆ’ ದೇಶದ ನೈತಿಕ ಹೋರಾಟದ ದಾಖಲೆ : ಬಿ.ಕೆ.ಹರಿಪ್ರಸಾದ್

Update: 2026-01-30 23:38 IST

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬರೆದಿರುವ ‘ನನ್ನ ಸತ್ಯಾನ್ವೇಷಣೆ’ ಕೃತಿ ಕೇವಲ ಆತ್ಮಚರಿತ್ರೆ ಮಾತ್ರವಲ್ಲ, ಅದು ಒಬ್ಬ ವ್ಯಕ್ತಿಯ ಜೀವನ ಕಥೆಗೆ ಮಾತ್ರ ಸೀಮಿತವಾಗುವುದಿಲ್ಲ, ನನ್ನ ಪ್ರಕಾರ ಅದು ಒಂದು ದೇಶದ ನೈತಿಕ ಹೋರಾಟದ ದಾಖಲೆ ಅಂತಲೇ ಭಾವಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಪುರಭವನದಲ್ಲಿ ಜನಮುಖಿ ಶೋಷಿತರ ಪರವಾದ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಅವರ ಹುತಾತ್ಮ ದಿನ ಹಾಗೂ ‘ನನ್ನ ಸತ್ಯಾನ್ವೇಷಣೆ’ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿ ತಮ್ಮ ತಪ್ಪುಗಳನ್ನು ಎಂದು ಮುಚ್ಚಿಡಲಿಲ್ಲ. ತಮ್ಮ ದೌರ್ಬಲ್ಯಗಳನ್ನು ಮರೆಮಾಚಲೂ ಇಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು ಸತ್ಯ ಎಂಬುದು ಒಂದಲ್ಲ ಒಂದು ದಿನ ಹೊರಗಡೆ ಬರುತ್ತದೆಂದು. ಹಾಗಾಗಿ ಅವರು ತಮ್ಮ ಇಡೀ ಬದಕನ್ನೇ ನನ್ನ ಸತ್ಯಾನ್ವೇಷಣೆ ಎಂದು ಕರೆದರು ಎಂದರು.

ಗಾಂಧೀಜಿ ಈ ಪುಸ್ತಕದಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ತಮ್ಮ ಧರ್ಮವನ್ನು ಪ್ರಶ್ನಿಸುತ್ತಾರೆ. ತಮ್ಮ ಆಸೆಗಳನ್ನು, ತಮ್ಮ ಖಾಸಗೀತನದ ಜೀವನವನ್ನು, ತಮ್ಮ ರಾಜಕೀಯ ನಿಲುವನ್ನೂ ಪರೀಕ್ಷೆಗೆ ಒಡ್ಡುತ್ತಾರೆ. ಆ ಮೂಲಕ ತನ್ನೊಳಗಿನ ಸತ್ಯದ ಅನ್ವೇಷಣೆಯ ಹುಡುಕಾಟಕ್ಕಾಗಿ ತೆರೆದುಕೊಳ್ಳುತ್ತಾರೆ. ಮಹಾತ್ಮರು ಮತ್ತೆ ಹುಟ್ಟಬಹುದು. ಆದರೆ ಮತ್ತೊಬ್ಬ ಗಾಂಧಿ ಹುಟ್ಟಲು ಸಾಧ್ಯವಿಲ್ಲ. ಇತ್ತೀಚಿಗೆ ನಾನು ಸಂದರ್ಶನದಲ್ಲಿ ಹೇಳಿದ್ದೆ. ಗಾಂಧಿಗೆ ಗಾಂಧಿಯೇ ಸಾಟಿ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸದ ಕಲಿಕೆಯನ್ನು ಮಾಡಿರಬಹುದು. ಆದರೆ ಜೀವಿಸಿದ್ದು ಈ ನೆಲದಲ್ಲಿ ಎಂದು ಹರಿಪ್ರಸಾದ್ ತಿಳಿಸಿದರು.

ಇಂದು ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಸುಳ್ಳುಗಳನ್ನೇ ವೈಭವೀಕರಿಸಲಾಗುತ್ತಿದೆ. ಗಾಂಧಿ ಸ್ವತಂತ್ರ ಚಳುವಳಿಗೆ ನೀಡಿದ ನಾಯಕತ್ವ, ಅದನ್ನ ನಡೆಸಿದ ರೀತಿ ಜಗತ್ತಿನ ಯಾವ ವಿಮೋಚನಾ ಚಳಿಯಲ್ಲೂ ಇಂತಹ ಐತಿಹಾಸಿಕ ಪುರುಷನನ್ನು ನೋಡಲು ಸಾಧ್ಯವಿಲ್ಲ. ಸ್ವತಂತ್ರ ಚಳುವಳಿಯ ಜೊತೆ ಜೊತೆಗೆ ಈ ನೆಲದಲ್ಲಿ ಶತಮಾನಗಳಿಂದಲೂ ಸಂಸ್ಕೃ ತಿಯ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಧರ್ಮದ ಕಾರಣಕ್ಕಾಗಿ ನಡೆಯುತ್ತಿದ್ದ ಮೌಢ್ಯ, ಅಂಧಶ್ರದ್ದೇ, ಅಸ್ಪೃ ಷ್ಯತೆ, ತಾರತಮ್ಮಗಳ ವಿರುದ್ಧ ನಡೆಸಿದ ಹೋರಾಟ ಇತಿಹಾಸದಲ್ಲಿ ದಾಖಲಾಗಿದೆ ಎಂದು ಹರಿಪ್ರಸಾದ್ ಹೇಳಿದರು.

ಕಾರ್ಯಕ್ರಮದಲ್ಲಿ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಜನಮುಖಿ ವೇದಿಕೆಯ ಅಧ್ಯಕ್ಷ ಡಾ.ಕೆ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಎಂ.ರಘುನಂದನ್, ಖಜಾಂಚಿ ಡಾ.ಪಿ.ಬಿ. ಜಯಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News