×
Ad

ಬೆಟ್ಟಹಲಸೂರು-ರಾಜಾನುಕುಂಟೆ ಭೂಸ್ವಾಧೀನ ಕೈಬಿಡಿ : ರೈತ ಸಂಘ

ಹಣ್ಣು, ಸೊಪ್ಪು, ತರಕಾರಿ ಪ್ರದರ್ಶಿಸಿ ಕೃಷಿ ಸಂಸ್ಕೃತಿ ಉಳಿಸಲು ಆಗ್ರಹ

Update: 2026-01-31 00:38 IST

ಬೆಂಗಳೂರು: ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯ ಸಿಂಗನಾಯಕನಹಳ್ಳಿ, ತಿಮ್ಮಸಂದ್ರ, ಬೆಟ್ಟಹಲಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈಲ್ವೆ ಇಲಾಖೆಯಿಂದ ಪ್ರಸ್ತಾವಿತ ವಿಶೇಷ ರೈಲು ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಪ್ರಮುಖರು ತಾವು ಬೆಳೆದಿರುವ ಹಣ್ಣು, ತರಕಾರಿ, ಸೊಪ್ಪುಗಳನ್ನು ಪ್ರದರ್ಶಿಸಿ ಕೃಷಿ ಸಂಸ್ಕೃತಿ ಉಳಿಸುವಂತೆ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ಅಗತ್ಯವಾಗಿರುವ ಹಣ್ಣು ತರಕಾರಿಯನ್ನು ಬೆಳೆಯುತ್ತಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಕೃಷಿ ಸಂಸ್ಕೃತಿ ನಾಶವಾಗುತ್ತದೆ. ಯಲಹಂಕ ಸಮೀಪದ ರಾಜನಕುಂಟೆಯಿಂದ ಬೆಟ್ಟಹಲಸೂರುವರೆಗೆ ಹೊಸ ರೈಲು ಮಾರ್ಗದ ಪ್ರಸ್ತಾವ ಅವೈಜ್ಞಾನಿಕವಾಗಿದ್ದು, ಇದರಿಂದ ಯಾವುದೇ ಉಪಯೋಗವಿಲ್ಲ ಎಂದರು.

ಒಟ್ಟು 80 ಎಕರೆ ಭೂ ಸ್ವಾಧೀನವಾಗುತ್ತಿದ್ದು, ಇದರಿಂದ ರೈತರ 300 ಎಕರೆಗೆ ತೀವ್ರ ತೊಂದರೆ ಎದುರಾಗಲಿದೆ. ಈ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ ಕಡತನಮಲೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಮಾವಳ್ಳಿಪುರ ಧನರಾಜ್, ನಂಜುಂಡಪ್ಪ, ಜೀರಿಗೆ ಬಾಬು, ಟಿ.ಪಿ.ಪ್ರಕಾಶ್, ಅಂಬರೀಶ್, ಸನತ್ ಕುಮಾರ್, ಸೌಭಾಗ್ಯಮ್ಮ, ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News