ದಲಿತ ರಾಜಕಾರಣಿಗಳ ವಿರುದ್ಧ ರಾಜಕೀಯ ಷಡ್ಯಂತ್ರ : ಡಾ.ಎಲ್.ಹನುಮಂತಯ್ಯ
ಬೆಂಗಳೂರು : ರಾಜ್ಯದಲ್ಲಿ ದಲಿತ ಶಾಸಕ, ಸಚಿವರುಗಳನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷದವರು ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಸಮುದಾಯ ನಾಯಕರು ಏನಾದರೂ ತಪ್ಪು ಮಾಡಿದ್ದರೆ, ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ದಲಿತರ ಮೇಲೆ ವಿನಾಕಾರಣ ವೈಯುಕ್ತಿಕ ದಾಳಿ ಮಾಡುವ ಪ್ರಯತ್ನಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಯುವ ಸಚಿವ ಪ್ರಿಯಾಂಕ್ ಖರ್ಗೆ ಸಂವಿಧಾನ ಹಾಗೂ ಕಾಂಗ್ರೆಸ್ ಸಿದ್ದಾಂತದ ಪರ ಹೋರಾಟ ಮಾಡುತ್ತಿದ್ದಾರೆ. ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಯಾವುದೇ ತಪ್ಪು ಇಲ್ಲದಿದ್ದರೂ ಭ್ರಷ್ಟಚಾರ ಅರೋಪದಲ್ಲಿ ಸಿಲುಕಿಸಿ ಅವರಿಂದ ರಾಜಿನಾಮೆ ಪಡೆಯುವ ಹುನ್ನಾರ ನಡೆಯುತ್ತಿದೆ. ವಿಪಕ್ಷದವರು ದಲಿತ ನಾಯಕರನ್ನು ಮುಂದಿಟ್ಟುಕೊಂಡು ಆಪಾದನೆ ಮಾಡುತ್ತಿದ್ದಾರೆ ಎಂದು ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ತನಿಖೆಯಾಗಲಿ. ಆರ್.ಬಿ.ತಿಮ್ಮಾಪುರ ಸಚಿವರಾದ ಮೇಲೆ ಅಬಕಾರಿ ಇಲಾಖೆಯಲ್ಲಿ ಸುಧಾರಣೆ ತಂದಿದ್ದಾರೆ. ನಗರ ಪ್ರದೇಶದಲ್ಲಿ 5ವರ್ಷ ಮೇಲ್ಪಟ್ಟು ಕೆಲಸ ಮಾಡುವವರಿಗೆ ವರ್ಗಾವಣೆ ಮಾಡಲಾಗಿದೆ. ಆದರೂ ಅವರ ವಿರುದ್ಧ ಜಾತಿ ರಾಜಕೀಯ ಹುನ್ನಾರ ನಡೆಯುತ್ತಿರುವುದು ಬೇಸರ. ಇಲಾಖೆಯ ಕೆಲವು ಅಧಿಕಾರಿಗಳು ಷಡ್ಯಂತ್ರ ಮಾಡಿ ಅವರ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆಂಬ ಸಂದೇಹವಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ನಾಯಕರು ದಲಿತ ನಾಯಕರನ್ನು ದೂಷಿಸುವ ಸಲುವಾಗಿ, ಪಕ್ಷದಲ್ಲಿ ದಲಿತರನ್ನು ನೇಮಿಸಿಕೊಂಡು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಗಾಂಧೀಜಿಗೆ ಅವಹೇಳನ ಮಾಡುತ್ತಾ, ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಾ ಪ್ರಜಾಪ್ರಭತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅಧಿಕಾರಿಗಳ ಷ್ರಡ್ಯಂತ್ರ, ಜಾತಿ ರಾಜಕೀಯ, ದಲಿತ ಸಚಿವರನ್ನು ತುಳಿಯಲು ಪ್ರಯತ್ನಿಸುತ್ತಿರುವರ ವಿರುದ್ದ ನಮ್ಮ ಹೋರಾಟ ಎಂದಿಗೂ ಇದ್ದೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖೆಗಳಲ್ಲಿ ಭ್ರಷ್ಟಾ ಚಾರ ನಡೆಯುತ್ತಿದ್ದರೆ, ತನಿಖೆ ನಡೆಸಬೇಕು ಎಂದು ಹನುಮಂತಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಗೌತಮ್ ಕೆ.ವಿ, ರಾಜು ಕಡಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.