×
Ad

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂ ಸ್ವಾಧೀನದಲ್ಲಿ ತೊಂದರೆ; ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ

Update: 2025-05-31 20:48 IST

ಬೆಂಗಳೂರು : ರಾಷ್ಟ್ರೀ ಹೆದ್ದಾರಿ ಪ್ರಾಧಿಕಾರದ ಯೋಜನೆಗಳಿಗೆ ಅಗತ್ಯ ಬಿದ್ದರೆ ಭೂ ಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಲು ಸಿದ್ದರಿದ್ದೇವೆ. ಹಳೆ ಯೋಜನೆಗಳು ಪೂರ್ಣಗೊಳ್ಳದೆ, ನಮಗೆ ಹೊಸ ಯೋಜನೆಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗಿನ ಎರಡನೇ ದಿನದ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಯೋಜನೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳು ಮುಂದಿಟ್ಟಾಗ ಗರಂ ಆದ ಮುಖ್ಯಮಂತ್ರಿ, ಎಷ್ಟು ವರ್ಷಗಳಿಂದ ಇದೇ ಕತೆ ಹೇಳಿಕೊಂಡು ಕೂತಿರ್ತೀರಿ? ಅಗತ್ಯ ಬಿದ್ದರೆ ಭೂ ಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಲು ನಾವು ಸಿದ್ದರಿದ್ದೇವೆ. ನೇಮಕ ಮಾಡಿಕೊಳ್ಳಿ ಎಂದು ಹೇಳಿದರು.

ಹಳೆ ಯೋಜನೆಗಳು ಪೂರ್ಣಗೊಳ್ಳದ ಹೊರತು ಹೊಸ ಹೆದ್ದಾರಿ ಯೋಜನೆಗಳು ನಮಗೆ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದಕ್ಕೆ, ಧ್ವನಿಗೂಡಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, 42 ಬಾಕಿ ಯೋಜನೆಗಳಲ್ಲಿ ನಾವು 22 ಯೋಜನೆಗಳನ್ನು ಮುಗಿಸಿದ್ದೇವೆ. ಕೇಂದ್ರದಿಂದಲೇ ಬಹಳ ಸಮಸ್ಯೆ ಆಗುತ್ತಿದೆ. ಕೇಂದ್ರದ ಅಧಿಕಾರಿಗಳು ಹಲವು ಕಡೆ ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಮಾಡಬೇಕಿದೆ ಎಂದರು.

ಎಲ್ಲೆಲ್ಲಿ ಬಾಟಲ್ ನೆಕ್ ಸಮಸ್ಯೆ ಇದೆ ಅವುಗಳನ್ನು ಮೊದಲ ಆದ್ಯತೆ ನೀಡಿ ಬಗೆಹರಿಸಬೇಕು. ಎಸ್‍ಎಲ್‍ಎಒ ಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಬರುವಂತೆ ಒಂದು ಸುತ್ತೋಲೆ ಹೊರಡಿಸಿ ಎಂದು ಮುಖ್ಯಮಂತ್ರಿ ಸೂಚಿಸಿದರು. ಮೇಲಿಂದ ಮೇಲೆ ಪರಿಶೀಲನೆ ನಡೆಸುತ್ತಿದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು, ಆ ಡೈರಿಯಲ್ಲಿ ಫೀಲ್ಡ್ ವರ್ಕ್ ಅನುಭವಗಳು, ಸಮಸ್ಯೆಗಳು, ಪರಿಹಾರ ಎಲ್ಲದರ ಬಗ್ಗೆಯೂ ಉಲ್ಲೇಖವಿರಬೇಕು. ಕಳೆದ ವರ್ಷದ ಸಭೆಯಲ್ಲಿ ಮತ್ತು ಎಲ್ಲ ಕೆಡಿಪಿ ಸಭೆಗಳಲ್ಲಿ ನಾನು ಸೂಚನೆ ನೀಡಿದ್ದೆ. ಇನ್ನೂ ಕೆಲವರು ಸಮರ್ಪವಾಗಿ ಡೈರಿಗಳನ್ನು ಬರೆದಿಲ್ಲ ಎನ್ನುವ ಮಾಹಿತಿ ಇದೆ. ನೀವು ಬರೆದ ಡೈರಿಗಳು ಸರಕಾರದ ಮುಖ್ಯ ಕಾರ್ಯದರ್ಶಿಗೆ ಬಂದರೆ ನಾನೂ ಗಮನಿಸಬಹುದು ಎಂದು ಅವರು ಸೂಚನೆ ನೀಡಿದರು.

ಕುರಿಗಾಹಿಗಳಿಗೆ ಬಂದೂಕು ಪರವಾನಗಿ :

ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು ಮತ್ತು ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು. ಕುರಿಗಳು ತಲೆ ಎತ್ತಿ ಮೇಯುವುದಿಲ್ಲ. ಅವು ತಲೆ ಬಗ್ಗಿಸಿಕೊಂಡು ಮೇಯುವುದರಿಂದ ಅರಣ್ಯ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಕುರಿಗಾಹಿಗಳಿಗೆ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ಮುಖ್ಯಮಂತ್ರಿ ಸೂಚಿಸಿದರು.

ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕು ಎಂದು ಸೂಚಿಸಿದ್ದೆ. ಇದಿನ್ನೂ ಕೆಲವು ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜೊತೆಗೆ, ಕುರಿಗಾಹಿಗಳನ್ನು ಕೊಲೆ ಮಾಡಿರುವ ಘಟನೆಗಳೂ ಕೂಡ ನಡೆದಿವೆ. ಹೀಗಾಗಿ ಬಂದೂಕು ಪರವಾನಗಿ ಕೊಡುವುದನ್ನು ಸಮರ್ಪಕಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಈ ವೇಳೆ ಮುಖ್ಯ ಕಾರ್ಯದರ್ಶಿ ಅವರು, ಕುರಿಗಾಹಿಗಳಿಗೆ ಬಂದೂಕು ನೀಡುವ ಕಾರ್ಯದ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ 15,16,731 ಎಕರೆ ಅರಣ್ಯೀಕರಣಕ್ಕೆ ಜಮೀನು ಲಭ್ಯವಿದೆ. 8.5 ಕೋಟಿ ಸಸಿಗಳನ್ನು ಕಳೆದ ಎರಡು ವರ್ಷಗಳಲ್ಲಿ ನೆಡಲಾಗಿದೆ. ಪ್ರತಿ ವರ್ಷ ಎಷ್ಟು ಎಕರೆ ಅರಣ್ಯೀಕರಣವಾಗಿದೆ? ಕಳೆದ 10 ವರ್ಷಗಳಲ್ಲಿ ಎಷ್ಟು ಎಕರೆ ಅರಣ್ಯೀಕರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು. ಅರಣ್ಯೀಕರಣಕ್ಕೆ ಲಭ್ಯವಿರುವ ಜಮೀನಿನಲ್ಲಿ ಸಂಪೂರ್ಣ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಆನೆ ಮತ್ತು ಮಾನವ ಸಂಘರ್ಷ ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು. ಆನೆ ಕಾರ್ಯಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಆನೆಗಳಿಗೆ ಸರಿಯಾದ ಆಹಾರ ಕಾಡಿನಲ್ಲೇ ಲಭ್ಯವಾಗುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ಲಂಟಾನಾ ಕಳೆಗಳನ್ನು ತೆಗೆಯುವ ಕೆಲಸವಾಗಬೇಕು. ಇದೇ ರೀತಿ ಕುಡಿಯುವ ನೀರಿನ ಲಭ್ಯತೆಯೂ ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಆನೆ, ಮಾನವ ಸಂಘರ್ಷಕ್ಕೆ ಹನಿ ಯೋಜನೆ: ಸಂತೋಷ್ ಲಾಡ್

ರಾಜ್ಯದಲ್ಲಿ ಹಲವು ಕಡೆ ಮಾನವ ಪ್ರಾಣಿ ಸಂಘರ್ಷದ ವೇಳೆ ಪ್ರಾಣಹಾನಿ ಆಗಿರುವ ಬಗ್ಗೆ ಮತ್ತು ಇದಕ್ಕೆ ವೈಜ್ಞಾನಿಕ ಪರಿಹಾರ ಒದಗಿಸುವ ಬಗ್ಗೆ ಗಂಭೀರ ಚರ್ಚೆ ಸಭೆಯಲ್ಲಿ ನಡೆಯಿತು. ಈ ವೇಳೆ ಸಚಿವ ಸಂತೋಷ್‌ ಲಾಡ್ ಅವರು, ಹನಿ ಫೆನ್ಸಿಂಗ್(ಜೇನು ಕೃಷಿ)ಬಗ್ಗೆ ಮುಖ್ಯಮಂತ್ರಿಗೆ ವಿವರಿಸಿದರು.

ಆನೆಗಳು ಜೇನು ನೊಣ ಇರುವ ಪ್ರದೇಶಕ್ಕೆ ಬರುವುದಿಲ್ಲ. ಹೀಗಾಗಿ ಆನೆ ಬ್ಯಾರಿಕೇಡ್ ಹಾಕಿರುವ ಮಾರ್ಗದುದ್ದಕ್ಕೂ ಜೇನು ಕೃಷಿ ಮಾಡಿದರೆ ರೈತರಿಗೂ ಅನುಕೂಲ, ಆನೆಗಳ ಕಾಟವೂ ತಪ್ಪುತ್ತದೆ ಎಂದು ಅವರು ವಿವರಿಸಿದರು.

ಸಣ್ಣ ನೀರಾವರಿ ಇಲಾಖೆ ಕೆರೆಗಳಲ್ಲಿ ಮೀನು ಸಾಕಣೆ ಮತ್ತು ಹರಾಜು ಪ್ರಕ್ರಿಯೆಯನ್ನು ಇ ಟೆಂಡರ್ ಮೂಲಕ ನಿರ್ವಹಿಸಬೇಕು. ಕೆರೆಗಳ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇದು ಆದಾಯದ ಮೂಲವೂ ಆಗುತ್ತದೆ ಎಂದು ಅವರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News