ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ: ವರದಿ ನೀಡಲು ಜಿ.ಪರಮೇಶ್ವರ್ ಸೂಚನೆ
ಜಿ.ಪರಮೇಶ್ವರ್
ಬೆಂಗಳೂರು : ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ನಿನ್ನೆ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು.
ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಕ್ನೋ ಮೂಲದ ಎನ್ನಲಾದ ವ್ಯಕ್ತಿ ಮೃತಪಟ್ಟಿದ್ದಾನೆ. ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲ ಎಂಬುದು ಕಾಣಿಸುತ್ತಿದೆ. ಪ್ರವಾಸಿಗರು ಬರುವುದರಿಂದ ಹೆಚ್ಚಿನ ರೀತಿಯಲ್ಲಿ ಕ್ರಮ ತೆಗೆಕೊಳ್ಳಬೇಕು. ಇದೆಲ್ಲವೆನ್ನು ಸೂಕ್ಷ್ಮದೃಷ್ಟಿಯಿಂದ ನೋಡಬೇಕು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಬಲೂನ್ ವ್ಯಾಪಾರಿಗೆ ಹೀಲಿಯಂ ಸಿಲಿಂಡರ್ ಹೇಗೆ ಸಿಕ್ಕಿದೆ, ಎಲ್ಲಿ ಖರೀದಿಸಿದ್ದ ಅದೆಲ್ಲವನ್ನು ತನಿಖೆ ಮಾಡಿ ವರದಿ ನೀಡಲಿದ್ದಾರೆ ಎಂದರು.
ನಾನು ಸಿಡಬ್ಲೂಸಿ ಸದಸ್ಯ ಅಲ್ಲ. ಹಾಗಾಗಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿಲ್ಲ. ಸಭೆಯಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚೆ ಆದರೆ ಗೊತ್ತಾಗುತ್ತದೆ ಎಂದ ಅವರು, ಹೊಸ ವರ್ಷ ಸಂಭ್ರಮಾಚರಣೆಯ ಕುರಿತಂತೆ ಪೊಲೀಸ್ ಅಧಿಕಾರಿಗಳೊಂದಿಗೆ ರವಿವಾರ ಸಭೆ ಕರೆದಿದ್ದೇನೆ. ಚರ್ಚೆ ಮಾಡಿ ಅಗತ್ಯ ಸೂಚನೆ ನೀಡುತ್ತೇನೆ ಎಂದು ಹೇಳಿದರು.