ರಾಹುಲ್ ಗಾಂಧಿ ಜನ್ಮ ದಿನಾಚರಣೆ: ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ಚೇತನರಿಗೆ ಗಾಲಿಕುರ್ಚಿ, ಲ್ಯಾಪ್ ಟಾಪ್ ವಿತರಣೆ
ಬೆಂಗಳೂರು, ಜೂ.19“ಸಮಾಜದ ಎಲ್ಲಾ ವರ್ಗದವರಿಗೂ ರಕ್ಷಣೆ ಸಿಗಬೇಕು, ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ರಾಹುಲ್ ಗಾಂಧಿ ಅವರ ಸಂದೇಶ. ಈ ದೇಶದ ರಕ್ಷಣೆಗೆ ಮುಂದಾಗಿರುವ ರಾಹುಲ್ ಗಾಂಧಿ ಅವರಿಗೆ ದೇವರು ಆರೋಗ್ಯ, ಸಂತೋಷ ಸಿಗಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಭ ಕೋರಿದರು.
ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜನ್ಮದಿನ ಅಂಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.
ಬಿ ವಿ ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 30 ಸಾವಿರ ನೋಟ್ ಬುಕ್ ಗಳಿಂದ ರಾಹುಲ್ ಗಾಂಧಿ ಅವರ ಭಾವಚಿತ್ರ ಬಿಡಿಸಿರುವುದನ್ನು ವೀಕ್ಷಿಸಿ, ವಿಶೇಷ ಚೇತನ ಕ್ರೀಡಾಪಟುಗಳಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ಸೈಕಲ್, ಗಾಲಿ ಕುರ್ಚಿ, ಲ್ಯಾಪ್ ಟಾಪ್ ವಿತರಣೆ ಮಾಡಿದರು.
“ಇಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜನ್ಮದಿನ ಆಚರಣೆ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ದೇಶಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ದೇಶಕ್ಕೆ ಅವರ ಬದ್ಧತೆಯನ್ನು ಸ್ಮರಿಸಲು ನಮ್ಮ ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ”ಎಂದು ತಿಳಿಸಿದರು.
“ರಾಹುಲ್ ಗಾಂಧಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಜಾತಿ ಗಣತಿ ವಿಚಾರವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆದರೆ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿದ್ದೇವೆ” ಎಂದು ಎಂದು ಅವರು ತಿಳಿಸಿದರು.
ಇಸ್ರೇಲ್ ನಿಂದ ಭಾರತೀಯ ವಿದ್ಯಾರ್ಥಿಗಳು ಮರಳುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಬೇಕು ಎಂಬುದು ನಮ್ಮ ಆದ್ಯತೆ. ಅದರ ಹೊರತಾಗಿ ಅಂತಾರಾಷ್ಟ್ರೀಯ ರಾಜಕೀಯ ವಿಚಾರವಾಗಿ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ”ಎಂದು ತಿಳಿಸಿದರು.
ಇಂದಿನ ಸಚಿವ ಸಂಪುಟದಲ್ಲಿ ಜಾತಿ ಗಣತಿ ವಿಚಾರ ಚರ್ಚೆ ಮಾಡಲಾಗುವುದೇ ಎಂದು ಕೇಳಿದಾಗ, “ನಾವು ಈಗಾಗಲೇ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದೇವೆ. ಇದರ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡುತ್ತೇವೆ”ಎಂದರು.